ಬೈಂದೂರು: ಇಲ್ಲಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಣಿ ಅಬ್ಬಕ್ಕ ಜಯಂತೋತ್ಸವ ಆಚರಣೆ ಸಮಿತಿ ವತಿಯಿಂದ ರಾಣಿ ಅಬ್ಬಕ್ಕ 500ನೇ ಜಯಂತೋತ್ಸವ ನಡೆಯಿತು.
ರಾಣಿ ಅಬ್ಬಕ್ಕನ ಧೀರತ್ವ, ಜೀವನ ಸಾಧನೆ, ಚರಿತ್ರೆ, ಯಶೋಗಾಥೆ ಮತ್ತು ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ವಿವರಣಾತ್ಮಕವಾದ ಎ ಐ ವಿಡಿಯೋ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಅಕ್ಷತಾ ಗಿರೀಶ್ ಅವರು ಮಾತನಾಡಿ ರಾಣಿ ಅಬ್ಬಕ್ಕನ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಹಾಗೂ ನಮ್ಮ ಕರಾವಳಿ ಭಾಗದ ಧೀಮಂತ ಮಹಿಳೆ ರಾಣಿ ಅಬ್ಬಕ್ಕಳ ಇತಿಹಾಸ ಮುಂದಿನ ಪೀಳಿಗೆಯವರಿಗೆ ಯಾವ ಕಾರಣಕ್ಕಾಗಿ ತಿಳಿದಿರಬೇಕು ಎಂಬುದರ ಬಗ್ಗೆ ವಿವರಿಸಿದರು.
ಅನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾಲೇಜಿನ ಪ್ರಾಂಶುಪಾಲರಾದ . ನಾಗರಾಜ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಇಂತಹ ಐತಿಹಾಸಿಕ ಚಾರಿತ್ರ್ಯವುಳ್ಳ ಕರಾವಳಿ ಹೆಣ್ಣು ಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ರೂಪಿಸಿದ್ದನ್ನು ಶ್ಲಾಘಿಸಿದರು.
ಜೆಸಿಐ ಬೈಂದೂರು ಸಿಟಿಯ ಪೂರ್ವ ಅಧ್ಯಕ್ಷರಾದ ಅನಿತಾ ಆರ್. ಕೆ., ಉದ್ಯಮಿಗಳಾದ ಗಣೇಶ ಗಾಣಿಗ ಉಪ್ಪುಂದ, ಗೋಪಾಲ್ ವಸ್ರೆ, ಯೋಗೇಂದ್ರ ಶೆಟ್ಟಿ ರಾಜೇಂದ್ರ ಬಿಜೂರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ನವೀನ್ ಎಚ್ ಜೆ ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ಕಾಲೇಜಿನ ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು

