ಜಿಲ್ಲಾಧಿಕಾರಿಗೆ ಮನವಿ
ಕುಂದಾಪುರ: ಕುಂದಾಪುರ ಪುರಸಭೆಯ 2ನೇ ವಾರ್ಡಿಗೆ ಸಂಬಂಧಿಸಿದಂತೆ ಖಾರ್ವಿ ಮೇಲ್ಕೆರಿ ಸರಕಾರಿ ಬಾವಿಕಟ್ಟೆ ಎನ್ನುವ ಸ್ಥಳದಲ್ಲಿ ಚರಂಡಿಗೆ ಹಾಗೂ ರಸ್ತೆಯ ಸಮೀಪವಾಗಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಈ ಸರಕಾರಿ ಬಾವಿಕಟ್ಟೆ ಸ್ಥಳವು ಸಾರ್ವಜನಿಕ ಸ್ಥಳವಾಗಿದ್ದು ಹೆಂಗಸರು ಬಟ್ಟೆ ಒಗೆಯುತ್ತಿದ್ದ ಸ್ಥಳವಾಗಿದೆ. ಈ ಸರಕಾರಿ ಜಾಗದಲ್ಲಿ ಒಂದು ಅಕ್ರಮ ಕಟ್ಟಡ ನಿರ್ಮಾಣವಾಗಿದೆ.
ಈ ಅಕ್ರಮ ಕಟ್ಟಡದಿಂದಾಗಿ ಈ ಭಾಗದ ಜನರಿಗೆ ಬಹಳ ತೊಂದರೆ ಉಂಟಾಗಿದೆ. ಮಹಿಳೆಯರಿಗೆ ಬಾವಿಯ ನೀರು ತರಲು ಹಾಗೂ ಬಟ್ಟೆ ಒಗೆಯಲು ಹಾಗೂ ಜನ ಓಡಾಡಲು ಸ್ಥಳವಿಲ್ಲದೆ ಅಡಚಣೆ ಆಗಿದ್ದು, ಕೊಡಲೇ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಆ ಅಕ್ರಮ ಕಟ್ಟಡವನ್ನು ತೆರವು ಗೊಳಿಸಿ
ಸಾರ್ವಜನಿಕರಿಗೆ ಬಟ್ಟೆ ಒಗೆಯಲಿಕ್ಕೆ ಕಟ್ಟೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಸತೀಶ್ ಖಾರ್ವಿಯವರು ಗ್ರಾಮಸ್ಥರ ಪರವಾಗಿ ಮಾನ್ಯ ಜಿಲ್ಲಾಧಿಕಾರಿಯಲ್ಲಿ ಹಾಗೂ ಮಾನ್ಯ ಪುರಸಭಾ ಮುಖ್ಯ ಅಧಿಕಾರಿಯಲ್ಲಿ ಮನವಿ ಮಾಡಿದ್ದಾರೆ