ಉಡುಪಿ : ಮಕ್ಕಳನ್ನು ಯಾವುದೇ ಮಾಧ್ಯಮದಲ್ಲಿ ಓದಿಸಿದರೂ, ಹೆತ್ತವರು ಮನೆಯಲ್ಲಾದರೂ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿಯೇ ಮಾತನಾಡಿ, ಇಲ್ಲದಿದ್ದಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಕರೆ ನೀಡಿದರು. ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ. ಆದ್ದರಿಂದ ಕನ್ನಡದ ಶಾಲೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು. ಮುಚ್ಚಿರುವ ಶಾಲೆಗಳು ಪುನಃ ಆರಂಭವಾಗಬೇಕು ಮತ್ತು ಕನ್ನಡ ಅನ್ನ ನೀಡುವ ಭಾಷೆಯಾಗಬೇಕು ಎಂಬ ಎರಡು ಧೈಯಗಳು ಕಸಾಪದ್ದು, ಆದರೆ ಅವು ಈಡೇರುವ ಲಕ್ಷಣಗಳೂ ಕಾಣುತ್ತಿಲ್ಲ ಯಾಕೆಂದರೆ ಈ ಬಗೆಗಿನ ಹೋರಾಟಕ್ಕೆ ನ್ಯಾಯಾಲಯದಲ್ಲಿಯೂ ಹಿನ್ನೆಡೆಯಾಗಿದೆ ಎಂದವರು ವಿಷಾದಿಸಿದರು.
ಸಮ್ಮೇಳನವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಹಿರಿಯ ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್ಟರು ಸಮ್ಮೇಳನದ ಸಭಾಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಮ್ಮೇಳನದ ಆಶಯದ ನುಡಿಗಳನ್ನಾಡಿದರು.
ಉಡುಪಿ ಶಾಸಕ ಯಶ್ವಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು

