ಕೋಟ : ಸಮುದ್ಯತಾ ಗ್ರೂಪ್ ಸಂಸ್ಥೆಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. ಕುಂದಾಪುರದ ಪುರಸಭಾ ವ್ಯಾಪ್ತಿಯಿಂದ ೧೪ ಕಿ.ಮೀ ವಿಸ್ತೀರ್ಣದಲ್ಲಿ ಆನ್ ಲೈನ್ ಆಹಾರ ವಿತರಣೆ ಮಾಡುವ ಸಮುದ್ಯತಾ ಆ್ಯಪ್ನ್ನು ಶನಿವಾರ ಲೋಕಾರ್ಪಣೆಗೊಳಿಸಿತು.
ಆ್ಯಪ್ ಬಿಡುಗಡೆ ಕಾರ್ಯಕ್ರಮವನ್ನು ಕೋಟದ ಜನತಾ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎ ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ತಂಡ, ಗುಣಮಟ್ಟದ ಆಹಾರ, ಸಮಯ ಪಾಲನೆಯಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.
ಇದೇ ಸಂದರ್ಭ ಸಂಸ್ಥೆಯ ಸುಮಾರು ನೂರಕ್ಕೂ ಮಿಕ್ಕಿ ಸಿಬ್ಬಂದಿಗಳಿಗೆ ಇಎಸ್ಐ ಮತ್ತು ಪಿ.ಎಫ್ ಸೌಲಭ್ಯಗಳನ್ನು ವಿತರಿಸಿದ ಚಾರ್ಟೆಡ್ ಅಕೌಂಟೆಂಟ್ ಕೆ. ಪದ್ಮನಾಭ ಕಾಂಚನ್ ಮಾತನಾಡಿ, ಸಮುದ್ಯತಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಆಡಳಿತ ವರ್ಗ ಅತ್ಯುತ್ತಮ ಸೇವಾ ಮನೋಭಾವ ಹೊಂದಿದ್ದು, ಒಂದೇ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗ್ರಾಹಕರನ್ನು ತಲುಪಲು ಯಶಸ್ಸು ಸಾಧಿಸಿರುವುದು ಶ್ಲಾಘನೀಯ ಎಂದರು.
ಖಾಸಗಿ ಆ್ಯಪ್ಗಳಿಂದ ಹೋಟೇಲ್ ಉದ್ಯಮ ಬಸವಳಿದು ಹೋಗಿದ್ದು, ಗ್ರಾಹಕರಿಗೆ ಹೊರೆಯಲ್ಲದ ಸ್ವಂತ ಆ್ಯಪ್ ಬಳಸುವುದು ಉದ್ಯಮಶೀಲತೆಯ ಆದ್ಯತೆಯಾಗಬೇಕು ಎಂದು ಬೆಂಗಳೂರು ಉದ್ಯಮಿ ರಾಘವೇಂದ್ರ ಕಾಂಚನ್ ಪಡುಕರೆ ಹೇಳಿದರು.
ಆ್ಯಪ್ ಬಿಡುಗಡೆಯ ತಕ್ಷಣ ಉದ್ಯಮಿ ಪ್ರಶಾಂತ್ ಎ ಕುಂದರ್ ಅವರು ಸ್ಥಳದಲ್ಲಿಯೇ ಆನ್ ಲೈನ್ ಮೂಲಕ ಪಾನೀಯ ಆರ್ಡರ್ ಮಾಡಿಸಿಕೊಂಡು ಅತಿಥಿಗಳಿಗೆ ನೀಡಿದರು. ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ ಉಪಸ್ಥಿತರಿದ್ದರು. ಸಂಸ್ಥೆಯ ಸಂದೀಪ್ ಆ್ಯಪ್ ಬಗ್ಗೆ ವಿವರಿಸಿ, ಸಂದೇಶ್ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರೂಪಿಸಿದರು.