ಕುಂದಾಪುರ : ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ಭಕ್ತಾದಿಗಳು ಕೊಡಮಾಡಿದ ಭವ್ಯ ರಜತ ರಥದ ಶೋಭಾ ಯಾತ್ರೆ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಕೋಟೇಶ್ವರದ ವಿಶ್ವಕರ್ಮ ಶಿಲ್ಪಕಲಾ ಶಾಲೆಯಿಂದ ಮಧ್ಯಾನ್ಹ 3.00 ಗಂಟೆಗೆ ಆರಂಭವಾದ ರಥದ ಶೋಭಾ ಯಾತ್ರೆ ದಕ್ಷಿಣಾಭಿಮುಖವಾಗಿ ಸಾಗಿ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಗೆ ತಲುಪಿತು. ದೇವಾಲಯದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯ ಮತ್ತು ಸದಸ್ಯರು ಹಾಗೂ ಭಕ್ತ ಸಮೂಹದವರು ಭಕ್ತಿಪೂರ್ವಕವಾಗಿ ರಥವನ್ನು ಬರಮಾಡಿಕೊಂಡು ಪೂಜೆ ನೆರವೇರಿಸಿದರು.
ಅಲ್ಲಿಂದ ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಟೇಶ್ವರದ ಮೂಲಕ ಅಂಕದಕಟ್ಟೆಯವರೆಗೂ ಸಾಗಿ, ಅಲ್ಲಿಂದ ಕೋಟೇಶ್ವರ ರಥಬೀದಿಯ ಮೂಲಕ ಶ್ರೀ ಕೋಟಿಲಿಂಗೇಶ್ವರ ದೇವಾಲವನ್ನು ತಲುಪಿತು. ಈ ಭವ್ಯ ಮೆರವಣಿಗೆಯಲ್ಲಿ ವಿಭಿನ್ನ ಬಗೆಯ ಟ್ಯಾಬ್ಲೋಗಳು, ಚಂಡೆ ಬಳಗ, ವಾದ್ಯ ವೃಂದಗಳಿದ್ದು ಭಾರೀ ಆಕರ್ಷಕವಾಗಿತ್ತು. ಸಾಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತರು, ಸಂಘ – ಸಂಸ್ಥೆಗಳವರು ಜನರಿಗೆ ಉಪಾಹಾರ – ಪಾನೀಯಗಳ ವ್ಯವಸ್ಥೆ ಮಾಡಿದ್ದರು. ಉತ್ಸಾಹಿಗಳ ಜಯಘೋಷ ಮುಗಿಲು ಮುಟ್ಟಿತ್ತು
ಇಂದು ಸೋಮವಾರ ಬೆಳಿಗ್ಗೆ ರಜತ ರಥವನ್ನು ಶ್ರೀ ದೇವರಿಗೆ ಸಮರ್ಪಿಸಲಾಗುವುದು. ವಿಶೇಷ ಪೂಜೆ, ಮಧ್ಯಾನ್ಹ ಮಹಾ ಸಂತರ್ಪಣೆ, ಸಂಜೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ರಂಗಪೂಜೆ, ನೂತನ ರಜತ ರಥೋತ್ಸವ ನಡೆಯಲಿವೆ.