ಉಡುಪಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ತೆರಳುತ್ತಿದ್ದಾರೆ. ಈವರೆಗೂ ಅಂದಾಜು 45 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಅಮೃತಸ್ನಾನ ಮಾಡಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಇದು ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿ ಅಸಂಖ್ಯ ಭಕ್ತರು, ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಉತ್ತರ ಭಾರತದ ಮಂದಿಗೆ ಪ್ರಯಾಗ್‌ರಾಜ್‌ಗೆ ತೆರಳುವುದು ಸುಲಭವಾದರೂ, ದಕ್ಷಿಣ ಭಾರತದ ಮಂದಿಗೆ ಅಷ್ಟು ದೂರದ ಪ್ರಯಾಣ ಮಾಡುವುದು ಸುಲಭವಲ್ಲ. ಇನ್ನು ವಿಮಾನದ ಟಿಕೆಟ್‌ಗಳು ಗಗನಕ್ಕೇರಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯದ ಕರಾವಳಿ ಭಾಗದಿಂದ ಕುಂಭಮೇಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದು ಇದೀಗ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಫೆ.17ನೇ ತಾರೀಖು ಮಧ್ಯಾಹ್ನ 12.30ಗೆ ಉಡುಪಿಯಿಂದ ಹೊರಟ ರೈಲು 19ನೇ ತಾರೀಖಿನಂದು ಬೆಳಿಗ್ಗೆ 6.30ಗಂಟೆಗೆ ಪ್ರಯಾಗ್ ರಾಜ್ ತಲುಪಲಿದೆ. ಹಾಗೂ ಮಾರನೇ ದಿನ 20ನೇ ತಾರೀಖಿನಂದು ಸಂಜೆ 6.30ಗಂಟೆಗೆ ಪ್ರಯಾಗ್ ರಾಜ್ ನಿಂದ ಹೊರಟು 22ರಂದು ಉಡುಪಿ ತಲುಪಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, ವಿಭಿನ್ನ ಆರ್ಥಿಕ ಹಿನ್ನೆಲೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾಮಾನ್ಯ ಮತ್ತು ಹವಾನಿಯಂತ್ರಣ ಕೋಚ್‌ಗಳನ್ನು ಸೇರಿಸಲಾಗಿದೆ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಜನತೆ ಇದರ ಉಪಯೋಗವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಸಂಸದರು ತಿಳಿಸಿದ್ದಾರೆ.
ರೈಲು ಟಿಕೆಟ್‌ಗಳು ರೈಲ್ವೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಥವಾ ಆಯಾ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಲಭ್ಯವಿದ್ದು ಯಾತ್ರಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸದರು ಮಾಹಿತಿ ನೀಡಿದ್ದಾರೆ

