ಬೆಂಗಳೂರು: ಮಂಡ್ಯ ಸಂಸದೆ ಸಮಲತಾ ಅಂಬರೀಷ್ ಬಿಜೆಪಿ ಟಿಕೆಟ್ಗಾಗಿ ಪ್ರಯತ್ನ ಮುಂದುವರಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ. ಬಳಿಕ ಸುದ್ದಿಗಾರರಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ಸುಮಲತಾ, “ಮಂಡ್ಯದ ಸೀಟು ಇನ್ನೂ ಹಂಚಿಕೆಯಾಗಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಬಯಸಿರುವುದು ಸಹಜ. ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ,” ಎಂದು ಹೇಳಿದರು.
“ನಿಮ್ಮಂತಹ ನಾಯಕಿ ಪಕ್ಷಕ್ಕೆ ಬೇಕು. ನಿಶ್ಚಿಂತರಾಗಿರಿ ಎಂದು ನಡ್ಡಾ ಹೇಳಿದ್ದಾರೆ. ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಆ ಬಳಿಕ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದೇನು ಎಂಬ ಬಗ್ಗೆ ನಿರ್ಧಾರ ಮಾಡುತ್ತೇನೆ,” ಎಂದರು. “ನಾನು ಸ್ಪರ್ಧೆ ಮಾಡಬೇಕು ಎಂಬುದಕ್ಕಿಂತ ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು ಮತ್ತು ಅದರಿಂದ ಮಂಡ್ಯದಲ್ಲಿ ಬಿಜೆಪಿ ನೆಲೆ ಉಳಿಯುತ್ತದೆ ಎಂಬುದು ನನ್ನ ಅಭಿಪ್ರಾಯ. ಸದ್ಯದ ಸಂಸತ್ ಅವಧಿ ಮುಕ್ತಾಯವಾದ ಬಳಿಕ ನಾನು ಬಿಜೆಪಿ ಸೇರುತ್ತೇನೆ. ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ,” ಎಂದು ಸ್ಪಷ್ಟಪಡಿಸಿದರು.