ಮಂಡ್ಯ : ಸಂಸದೆ ಸುಮಲತಾ ಅಂಬರೀಷ್ ಅವರ ಸ್ಪರ್ಧೆ ಕುರಿತ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಕಳೆದ ಬಾರಿ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದ ಸುಮ ಲತಾ ಅವರು, ಈ ಬಾರಿ ಚುನಾವಣಾ ಕಣದಿಂದ ದೂರವುಳಿಯಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಬಿಜೆಪಿ ಸೇರುವುದಾಗಿ ತಿಳಿಸಿರುವ ಅವರು ಮಂಡ್ಯ ವನ್ನು ಬಿಟ್ಟು ಹೋಗಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ನನಾಯಕರೊಬ್ಬರು ಸುಮಲತಾ ಅವಶ್ಯಕತೆ ಹಿಂದೆ ಇರಲಿಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿಗರು ಬೇಡ ಎಂದ ಮೇಲೆ ನಾನು ಅಲ್ಲಿಗೆ ಹೋಗುವುದಿಲ್ಲ ನನಗೆ ಗೌರವವಿಲ್ಲದ ಕಡೆಗೆ ನಾನು ಹೋಗುವುದೂ ಇಲ್ಲ. ನಿಮ್ಮ ನಾಯಕತ್ವ ಪಕ್ಷಕ್ಕೆ ಅಗತ್ಯವಿದೆ ಎಂದು ಮೋದಿ ನನಗೆ ಹೇಳಿದ್ದಾರೆ. ಹೀಗಾಗಿ ಅವರ ನಾಯಕತ್ವದಲ್ಲಿ ಮುನ್ನಡೆಯುವುದಕ್ಕೆ ನಿರ್ಧರಿಸಿದ್ದೇನೆ. ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ ಎಂದರು.