ಕಾರ್ಕಳ : ಕಾರ್ಕಳ ಶಾಸಕರಾದ ಶ್ರೀ ವಿ.ಸುನಿಲ್ ಕುಮಾರ್ ರವರು ಡಿಸೆಂಬರ್ 19 _ ಮಂಗಳವಾರ ಅಪರಾಹ್ನ 3:30 ಗೆ ಸಾಣೂರು ಪುಲ್ಕೇರಿ ಬೈಪಾಸ್ ಬಳಿಯಿಂದ ಮುರತಂಗಡಿ ಪರಿಸರದ ಸಾಣೂರು ಪದವಿಪೂರ್ವ ಕಾಲೇಜುವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸರ್ವಿಸ್ ರೋಡ್ ನಿರ್ಮಾಣ:
ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ಶ್ರೀರಾಮ ಮಂದಿರದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಿ, ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಶ್ರೀ ಮಹಮ್ಮದ್ ಅಜ್ಮಿಯವರಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಕಾಮಗಾರಿ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವುದಾಗಿ ಯೋಜನಾಧಿಕಾರಿ ಶಾಸಕರಿಗೆ ತಿಳಿಸಿದರು.
ಚರಂಡಿ ವ್ಯವಸ್ಥೆ:
ಫುಲ್ಕೇರಿ ಬೈಪಾಸ್ ಇಂದಿರಾನಗರಕ್ಕೆ ಹೋಗುವ ರಸ್ತೆಯ ಬಳಿ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯ ಪಂಚಾಯಿತಿ ಸದಸ್ಯರಾದ ಶ್ರೀ ಸತೀಶ್ ರವರು ಶಾಸಕರಿಗೆ ಮನವಿ ಮಾಡಿದರು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ ಶಾಸಕರು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು.
ಸಾಣೂರು ಯುವಕ ಮಂಡಲದ ಮೈದಾನದ ಅಂಚಿನಲ್ಲಿ ಮಣ್ಣು ಕುಸಿದಿರುವುದನ್ನು ಗಮನಿಸಿದ ಶಾಸಕರು ಕೂಡಲೇ ಗುಡ್ಡ ಕಡಿದಿರುವ ಜಾಗದ ಮಣ್ಣು ಇನ್ನಷ್ಟು ಕುಸಿದು ರಸ್ತೆಗೆ ಬೀಳದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸೂಚಿಸಿದರು.