ಶಿವಮೊಗ್ಗ: ಹಾಸನ ಪೆನ್ಡೈವ್ ವಿಡಿಯೋ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ನಿಂದ ಉಚ್ಚಾಟನೆ ಮಾಡುವ ಬಗ್ಗೆ ಭಾನುವಾರವೇ ತೀರ್ಮಾನ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸೋಮವಾರ ಮಾಧ್ಯಮದ ವರೊಂದಿಗೆ ಮಾತನಾಡಿ, ಮಂಗಳವಾರ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಆಗಬೇಕಿತ್ತು. ಇದರ ಆದೇಶ ದಿಲ್ಲಿಯಿಂದ ಆಗಬೇಕು. ಈ ಬಗ್ಗೆ ನಾನೇ ದೇವೇಗೌಡರಿಗೆ ಶಿಫಾರಸು ಮಾಡಿದ್ದೇನೆ. ಆದರೆ ಬಹಳ ಜನರು ಈ ವಿಚಾರದಲ್ಲಿ ಆತುರ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ ಪೆನ್ಡೈವ್ ಹಂಚಿದ್ಯಾರು ? ಇದನ್ನು ದೊಡ್ಡದಾಗಿ ಮಾಡಲು ಕಾಂಗ್ರೆಸ್ನವರು ಎಲ್ಲಾ ರೀತಿಯ ಕುತಂತ್ರ ನಡೆಸಿದ್ದಾರೆ. ಇಲ್ಲಿ ಪ್ರಶ್ನೆ ಉಚ್ಚಾಟನೆ ಮಾಡುವುದಷ್ಟೇ ಅಲ್ಲ ಎಸ್ಐಟಿ ತನಿಖೆ ಜೊತೆಗೆ ಹಲವು ವಿಷಯಗಳ ತನಿಖೆಯಾಗಬೇಕಿದೆ. ಪೆನ್ಡೈವ್ ಸೃಷ್ಟಿಯಾದ ಬಗ್ಗೆಯೂ ತನಿಖೆ ನಡೆಯಬೇಕು. ಹಾಸನದಲ್ಲಿ ಸುಮಾರು ಒಂದು ಲಕ್ಷ ಪೆನ್ಡೈವ್ ಹಂಚಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು