ದೋಹಾ : ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳನ್ನು ಅಲ್ಲಿನ ನ್ಯಾಯಾಲಯ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ನ ರಾಜ ಶೇಖ್ ತಮಿಮ್ ಬಿನ್ ಹಮದ್ ಅಲ್-ಥನಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿ ಧನ್ಯವಾದ ಅರ್ಪಿಸಿದರು ಗುರುವಾರ ನಡೆದ ಮಾತುಕತೆಯ ವೇಳೆ ಕತಾರ್ ನಲ್ಲಿನ ಭಾರತೀಯ ಸಮುದಾಯದ ರಕ್ಷಣೆಗಾಗಿ ಮೋದಿಯವರು ತಮಿಮ್ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಯುಎಇ ಪ್ರವಾಸಕ್ಕೆ ತೆರಳಿದ್ದ ಮೋದಿ ಬುಧವಾರ ಅಲ್ಲಿ ಬೃಹತ್ ಹಿಂದೂ ದೇಗುಲವನ್ನು ಲೋಕಾರ್ಪಣೆ ಮಾಡಿದ ಬಳಿಕ ರಾತ್ರಿ ಕತಾರ್‌ಗೆ ತೆರಳಿದ್ದರು
ಗುರುವಾರ ಕತಾರ್‌ನ ದೊರೆ ಶೇಖ್ ತಮಿಮ್ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಮಾತುಕತೆ ನಡೆಸಿದರು. ‘ವ್ಯಾಪಾರ, ಹೂಡಿಕೆ, ಇಂಧನ, ಬಾಹ್ಯಾಕಾಶ, ಸಂಸ್ಕೃತಿ ಹಾಗೂ ಜನರ ಸಹಭಾಗಿತ್ವದ ಕುರಿತು ಫಲಪ್ರದ ಮಾತುಕತೆ ನಡೆಯಿತು.
ಇದೇ ವೇಳೆ ಉಭಯ ನಾಯಕರು ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತೂ ಚರ್ಚಿಸಿದರು‘ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.