ಕುಂದಾಪುರ : ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಸಹಿತ ವಿವಿಧ ಜಿಲ್ಲೆಗಳಲ್ಲಿ ಮನೆಗಳ್ಳತನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಕುಂದಾಪುರ ನಗರ ಭಾಗದಲ್ಲಿ ನಡೆದ ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ಬಾಡಿ ವಾರಂಟ್ ಮೂಲಕ ಕುಂದಾಪುರ ಠಾಣಾಧಿಕಾರಿ ನಂಜಾ ನಾಯಕ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸೊಲ್ಲಾಪುರ ಭಾಗದ ನಿವಾಸಿಗಳಾದ ವಿವೇಕ್ ಅಂಬರ್ (26), ಅಜೀಜ್ (28), ಲಖನ್ ಅಶೋಕ್ ಕುಲಕರ್ಣಿ (31) ಹಾಗೂ ಸಂದೀಪ್ ದಿಲೀಪ್ (25) ಬಂಧಿತ ಆರೋಪಿಗಳು.
ಇವರು ಕಳೆದ ಜು.19 ರಂದು ಇಲ್ಲಿನ ಪುರಸಭೆ ವ್ಯಾಪ್ತಿಯ ಬಿಬಿ ರಸ್ತೆಯ ವೆಸ್ಟ್ ಬ್ಲಾಕ್‌ನಲ್ಲಿರುವ ರೋಹಿತ್ ಅವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ಸೊತ್ತುಗಳನ್ನು ಕಳವುಗೈದಿದ್ದರು.
ಇನ್ನು ಇಲ್ಲಿನ ಪಿ. ರವೀಂದ್ರ ಅವರ ಮನೆಗೆ ನುಗ್ಗಿದ ಕಳ್ಳರು ಬೆಳ್ಳಿ, ಚಿನ್ನಾಭರಣ ಸೇರಿದಂತೆ ಒಟ್ಟಾರೆ 4.57 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದರು. ಇದಲ್ಲದೆ ಇವರು ಹಳಿಯಾಳ ಠಾಣಾ ವ್ಯಾಪ್ತಿಯಲ್ಲೂ ನಡೆದ ಕಳ್ಳತನದಲ್ಲಿ ಭಾಗಿಯಾಗಿದ್ದರು.

