ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿ, ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಹೆಜಮಾಡಿ ಗ್ರೀನ್ ಹೌಸ್‌ನ ಮೊಹಮ್ಮದ್ ಅಸ್ಲಾಂ (23), ಕಾಟಿಪಳ್ಳ ಆಶ್ರಯ ಕಾಲೊನಿ ನಿವಾಸಿ ಚೇತನ್ (20), ಚೇಳ್ಯಾರ್‌ನ ನಿತಿನ್ ಅಡಪ (23), ಫರಂಗಿಪೇಟೆ ಆರ್ಕುಳ ಕೊಪ್ಪಲ್ ಹೌಸ್‌ನ ರಿಯಾಝ್ ಇಬ್ರಾಹಿಂ (30), ಕೂಳೂರು ಕಿಲೇ ರಿಯಾ ಮಸೀದಿ ಬಳಿಯ ನಿವಾಸಿ ಜಮಾಲ್ ಝಾಕೀರ್ (21), ಹಳೆಯಂಗಡಿ ಕೊಳವೈಲ್‌ನ ಗುರುಪ್ರಸಾದ್ ಬಂಧಿತರು.
ಈ ಪೈಕಿ ಮೊಹಮ್ಮದ್ ಅಸ್ಲಾಂ ಹಾಗೂ ರಿಯಾಝ್ ಇಬ್ರಾಹಿಂ, ಸೌದಿ ಅರೇಬಿಯಾದಲ್ಲಿದ್ದು, ಲುಕ್‌ಔಟ್ ಸುತ್ತೋಲೆ ಹೊರಡಿಸಿ, ಅಲ್ಲಿನ ಪೊಲೀಸರ ಮೂಲಕ ಕರೆಸಿಕೊಂಡು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಬಂಟ್ವಾಳ ಹತ್ಯೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದ್ದು ಇಂತಹ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

