ಕುಂದಾಪುರ : ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕಳವು ಮಾಡಿದ ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿಗಳಾದ ಅಬೂಬಕರ್ (39) ಮತ್ತು ಯಾಕೂಬ್ (24), ಗುಲ್ವಾಡಿ ದಾಸರಬೆಟ್ಟು ನಿವಾಸಿ ಮಹಮ್ಮದ್ ರಫೀಕ್ (36) ಹಾಗೂ ತಲ್ಲೂರು ಕೋಟೆಬಾಗಿಲು ನಿವಾಸಿ ಸುನೀಲ್ (33) ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೊಲೆರೋ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಎಸ್ಪಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ನಿರ್ದೇಶನದಂತೆ ಕುಂದಾಪುರ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್ ಡಿ. ಗೌಡ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ, ಕುಂದಾಪುರ ಸಂಚಾರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ನೂತನ್ ಡಿ., ಶಂಕರನಾರಾಯಣ ಪೊಲೀಸ್ ಠಾಣಾ ಉಪ ನಿರೀಕ್ಷಕ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಯವರಾದ ರಾಜು ಬಿ., ಸಂತೋಷ್, ಶ್ಯಾಮ,ಕಿಶನ್ గౌడ్, శ్రీధరా బా ಕಿರಣ್ ಬಿ. ಮೌನೇಶ್, ಪಾಟೀಲ್, ಲೋಹಿತ್ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಳಾವರ ಗ್ರಾಮದ ಮನೋಹರ ಜು.27ರಂದು ಬೆಳಿಗ್ಗೆ ತಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ನಂತರ 2 ದನಗಳು ಮನೆಗೆ ವಾಪಸು ಬಂದಿರಲಿಲ್ಲ.28ರಂದು ಬೆಳಿಗ್ಗೆ ಒಂದು ದನ ಮನೆಗೆವಾಪಸು ಬಂದಿದ್ದು ಇನ್ನೊಂದು ದನ ಬಂದಿರಲಿಲ್ಲ. ಕಾಳಾವರ ಜಂಕ್ಷನ್ ಬಳಿಯಲ್ಲಿರುವ ಬೇಕರಿಯೊಂದರ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ದನ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

