ಕುಂದಾಪುರ: ಮಗನ ಹುಟ್ಟುಹಬ್ಬ ಆಚರಿಸಲು ಊರಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಸಿದ್ದಾಪುರ ಗ್ರಾಮದ ಸುರೇಶ ಶೆಟ್ಟಿ (38 ವರ್ಷ) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಸುರೇಶ್ ಶೆಟ್ಟಿ ಅವರು ತಮ್ಮ ಕಿರಿಯ ಮಗನೊಂದಿಗೆ ಮನೆ ಸಮೀಪ ಮರದಿಂದ ಮಾವು ಕೀಳಲು ಹೊರಟಿದ್ದರು. ಆಗ ಹಠಾತ್ತನೇ ಸಿಡಿಲು ಅವರ ಎದೆಗೆ ಬಡಿದು, ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕಿರಿಯ ಮಗ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ‘ಇಲ್ಲಿನ ಹೆನ್ನಬೈಲು ಮೂಲದ ಬಸವ ಶೆಟ್ಟಿ ಅವರ ಪುತ್ರ ಸುರೇಶ್ ಶೆಟ್ಟಿ ಬೆಂಗಳೂರಿನ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಮಗನ ಹುಟ್ಟುಹಬ್ಬ ಆಚರಿಸಲು ಮನೆಗೆ ಬಂದಿದ್ದ ಅವರು, ಪತ್ನಿಯ ನಿವಾಸದಲ್ಲಿ ತಂಗಿದ್ದರು. ಅವರ ಹಠಾತ್ ಸಾವು ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಮೃತರು ಪತ್ನಿ ವಿನೋದ, ಎಂಟು ವರ್ಷದ ಸುಮೋದ್ ಮತ್ತು ನಾಲ್ಕು ವರ್ಷದ ಮಗ ಸರ್ವದಾ ಅವರನ್ನು ಅಗಲಿದ್ದಾರೆ. ಈ ಘಟನೆ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.