ಬೈಂದೂರು: ಸ್ಥಳೀಯ ಪೋಲೀಸ್ ಠಾಣಾ ವ್ಯಾಪ್ತಿಯ ಶಿರೂರು ಚೆಕ್ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂಪಾಯಿ ನಗದನ್ನು ಬೈಂದೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಮಾರ್ಚ್ 16 ರಂದು ಬೈಂದೂರಿನ ಪೋಲೀಸ್ ಉಪನಿರೀಕ್ಷಕರಾದ ಬಿ.ಎಸ್. ನಿರಂಜನ್ ಗೌಡ ಅವರು ಸಿಬ್ಬಂದಿಗಳೊಂದಿಗೆ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ಚಕ್ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ನೋಂದಣಿ ಸಂಖ್ಯೆ ಇಲ್ಲದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನ ಹಿಂಬದಿ ಸೀಟಿನ ಕೆಳಭಾಗದಲ್ಲಿ ಪ್ಲಾಸ್ಟಿಕ್ ಚೀಲವೊಂದು ಕಂಡು ಬಂದಿದ್ದು, ಅದರಲ್ಲಿ ಹಣವಿರುವುದು ಪತ್ತೆಯಾಗಿದೆ.
ಕಾರಿನ ಚಾಲಕನ ಹತ್ತಿರ ಹಣದ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ರೀತಿಯ ದಾಖಲೆ ಇಲ್ಲದಿರುವುದರಿಂದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಕಾರು ಚಾಲಕ ಬೆಳ್ತಂಗಡಿ ತಾಲೂಕು ಶಿರ್ಲಾಲು ನಿವಾಸಿ ಬಶೀರ್ (42 ವರ್ಷ) ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಬೈಂದೂರು ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.