ಕುಂದಾಪುರ: ಸಮೀಪದ ಕೋಣಿ ಎಂಬಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ 44 ಗ್ರಾಂ ತೂಕದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಕೋಣಿ ಗ್ರಾಮದ ವಿಜಯ (34ವರ್ಷ) ಎಂಬಾತ ಬಂಧಿತ ಆರೋಪಿ
ಕುಂದಾಪುರ ಸಮೀಪದ ಕೋಣಿಯ ಮನೆಯೊಂದರ ಕಪಾಡಿನಲ್ಲಿ 44 ಗ್ರಾಂ ತೂಕದ ಚಿನ್ನಾಭರಣಗಳನ್ನಿಟ್ಟು ಕುಟುಂಬದವರು ಬೆಂಗಳೂರಿಗೆ ಹೋಗಿದ್ದು, ವಾಪಾಸ್ ಬಂದು ನೋಡಿದಾಗ ಚಿನ್ನಾಭರಣಗಳನ್ನು ಕಳವು ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಮಾ.31ರಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಳವು ಆರೋಪಿಯ ಬಗ್ಗೆ ಪತ್ತೆ ಕಾರ್ಯ ಆರಂಭಿಸಿದ ಕುಂದಾಪುರ ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಆರೋಪಿ ವಿಜಯ್ ಎಂಬಾತನನ್ನು ಕುಂದಾಪುರ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈತನಿಂದ ಕಳವಾದ ಒಟ್ಟು 44 ಗ್ರಾಂ ತೂಕದ ಸುಮಾರು 2 ಲಕ್ಷದ 64 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ನೇತೃತ್ವದಲ್ಲಿ ಕುಂದಾಪುರ ಠಾಣೆಯ ಪೊಲೀಸ್ ನಿರೀಕ್ಷಕ ಯು.ಬಿ. ನಂದಕುಮಾರ, ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಪ್ರಸಾದ್ ಕುಮಾರ್ ಕೆ., ಸಿಬ್ಬಂದಿಗಳಾದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು