ಮಣಿಪಾಲ : ಹಾಸನದಿಂದ ಉಡುಪಿಗೆ ರೌಡಿ ಇಸಾಕ್ ನನ್ನು ಕರೆತರುತಿದ್ದಾಗ ತಪ್ಪಿಸಿಕೊಳ್ಳಲೆತ್ನಿಸಿದ ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಹಿರಿಯಡಕ ಬಳಿ ಪೊಲೀಸರು ಗುಂಡು ಹಾರಿಸಿ ಹೆಡೆಮುರಿಗಟ್ಟಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸ್ ವಾಹನದ ಗಾಜನ್ನು ಇಸಾಕ್ ಒಡೆದಿದ್ದು ಇದರಿಂದ ಮೂವರು ಪೊಲೀಸರಿಗೆ ಗಾಯಗಳಾಗಿವೆ.
ಉಡುಪಿ ಮತ್ತು ಬೆಂಗಳೂರು ಪೊಲೀಸರಿಗೆ ಬೇಕಾಗಿರುವ ಗರುಡ ಗ್ಯಾಂಗಿನ ಇಸಾಕ್ ಮತ್ತು ಇತರ ಮೂವರನ್ನು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಬಂಧಿಸಿ ಬುಧವಾರ ಉಡುಪಿಗೆ ಕರೆತರುತಿದ್ದರು.
ಈ ಸಂದರ್ಭದಲ್ಲಿ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ, ಸುಮಾರು 7.15ಕ್ಕೆ ಆರೋಪಿ ಇಸಾಕ್ ತನಗೆ ತುರ್ತಾಗಿ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿದ. ಪೊಲೀಸರು ವಾಹನವನ್ನು ನಿಲ್ಲಿಸಿ, ಮೂತ್ರ ವಿಸರ್ಜನೆ ಅವಕಾಶ ನೀಡಿದರು. ನಂತರ ಮತ್ತೆ ವಾಹನ ಹತ್ತುವಾಗ ಏಕಾಏಕಿ ಆತನ ಕೈಗೆ ಕಟ್ಟಿದ್ದ ಸರಪಳಿ (ಲೀಡಿಂಗ್ ಜೈನ್) ಹಿಡಿದಿದ್ದ ಉಡುಪಿ ನಗರ ಠಾಣೆಯ ಸಿಬ್ಬಂದಿಯನ್ನು ಬಲವಾಗಿ ತಳ್ಳಿ ತಪ್ಪಿಸಿಕೊಳ್ಳಲೆತ್ನಿಸಿದ. ಆಗ ವಾಹನದಲ್ಲಿದ್ದ ಇಬ್ಬರು ಪೊಲೀಸ್ ಉಪನಿರೀಕ್ಷಕರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಬಲವಾಗಿ ಅವರಿಗೆ ಒದ್ದು ತಪ್ಪಿಸಿಕೊಳ್ಳಲೆತ್ನಿಸಿದ. ಆಗ ಆತ ಕೈಯ ಸರಪಳಿ ಬಡಿದು ವಾಹನದ ಎದುರಿನ ಗ್ಲಾಸ್ ಒಡೆದು, ಒಳಗಿದ್ದ ಅಧಿಕಾರಿ ಹಾಗೆ ಇಬ್ಬರು ಸಿಬ್ಬಂದಿಗೆ ಗಾಯಗಳಾಗದವು.
ಈ ತಂಡದ ನೇತೃತ್ವ ವಹಿಸಿದ್ದ ಮಣಿಪಾಲ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ್ ಅವರು ಇಸಾಕ್‌ಗೆ ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಆತ ಕೇಳದಿದ್ದಾಗ ಇನಸ್ಪೇಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಇನ್ಸ್‌ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ಕೆಳಗೆ ಬೀಳಿಸಿದರು. ನಂತರ ಆತನನ್ನು ವಶಕ್ಕೆ ಪಡೆದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಜೊತೆಗೆ ಗಾಯಗೊಂಡ ಒಬ್ಬ ಸಬ್‌ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಸಿಬ್ಬಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

