Home » ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸ್
 

ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸ್

ನ್ಯಾಮತಿ ಎಸ್‌ಬಿಐ ಲೂಟಿ ಪ್ರಕರಣ, ಸಾಲ ಕೊಡದ್ದಕ್ಕೆ ಬ್ಯಾಂಕನ್ನೇ ಕೊಳ್ಳೆಹೊಡೆದ ಗ್ಯಾಂಗ್‌

by Kundapur Xpress
Spread the love

ದಾವಣಗೆರೆ : ಜಿಲ್ಲೆಯ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ)ನಲ್ಲಿ ನಡೆದಿದ್ದ ರಾಜ್ಯದ ಅತೀ ದೊಡ್ಡ ಚಿನ್ನ ಕಳ್ಳತನ ಪ್ರಕರಣ ಭೇದಿಸಿರುವ ದಾವಣಗೆರೆ ಪೊಲೀಸರು, ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದ ಸುಮಾರು 15.30 ಕೋಟಿ ಮೌಲ್ಯದ 17.01 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮದುರೈ ಮೂಲದ, ಹಾಲಿ ನ್ಯಾಮತಿಯಲ್ಲಿ ವಿಐಪಿ ಸ್ಟ್ಯಾಕ್ಸ್  ಅಂಡ್ ಸ್ವೀಟ್ ಬೇಕರಿ ನಡೆಸುತ್ತಿದ್ದ ವಿಜಯಕುಮಾರ (30), ಆತನ ಸಹೋದರ ಅಜಯಕುಮಾರ (28), ಸಂಬಂಧಿ ಪರಮಾನಂದ (30), ನ್ಯಾಮತಿ ಶಾಂತಿನಗರ ಶಾಲೆ ಎದುರಿನ ಬೆಳಗುತ್ತಿ ಕ್ರಾಸ್ ನಿವಾಸಿ, ಪೈಟಿಂಗ್ ಕೆಲಸಗಾರ ಅಭಿಷೇಕ್ (23), ಸುರಹೊನ್ನೆ ಶಾಂತಿ ನಗರದ ವಾಸಿ ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು.

ದಾವಣಗೆರೆ ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು, ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಅವರು ಕಳ್ಳತನ ಮತ್ತು ಚಿನ್ನ ಅಡಗಿಸಿಟ್ಟ ಕುತೂಹಲಕಾರಿ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸಿದರು.

ಪ್ರಕರಣದ ಹಿನ್ನೆಲೆ:

ಕಳೆದ ವರ್ಷ ಅ.28ರಂದು ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ 17.7 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್ ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿ, ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಕಿಂಚಿತ್ತೂ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಬ್ಯಾಂಕ್ ಒಳಗೇನಾಗಿತ್ತು ? 

ಬ್ಯಾಂಕ್ ಬಲಭಾಗದ ಕಬ್ಬಿಣದ ಕಿಟಕಿ ಗ್ರಿಲ್ ತುಂಡರಿಸಿ ಒಳನುಸುಳಿದ್ದ ದರೋಡೆಕೋರರು, ಸಿಸಿ ಟಿವಿ, ಅಲರಾಂ, ಎಲ್ಲ ವೈರ್‌ಗಳ ಸಂಪರ್ಕ ತೆಗೆದು ಹಾಕಿ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಸ್ಟ್ರಾಂಗ್ ರೂಂಗೆ ಇದ್ದ ಗ್ರಿಲ್ ಡೋರ್ ಬೀಗ ಮುರಿದು ಹಾಕಿದ್ದರು.

ಏನಿದು ಕೇಸ್ ?

ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ 2024 ಅ.28ರಂದು ಲೂಟಿಯಾಗಿತ್ತು. ಜನವರಿಯಲ್ಲಿ ದಕ್ಷಿಣ ಕನ್ನಡದ ಸಹಕಾರಿ ಬ್ಯಾಂಕ್‌ ವೊಂದರಲ್ಲಿ ಲೂಟಿಯಾಗಿದ್ದ ಚಿನ್ನಕ್ಕಿಂತ ಇದರ ಮೌಲ್ಯ ಹೆಚ್ಚು

ಮಾಡಿದ್ದು ಯಾರು ?

ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಎಸ್‌ ಬಿ ಐ ನಿಂದ 14 ಲಕ್ಷ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಅದು ತಿರಸ್ಕಾರವಾಗಿತ್ತು. ಬಳಿಕ ತನ್ನ ಬಂಧುಗಳ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸಲಾಗಿತ್ತು. ಈ ಸಿಟ್ಟಿನಿಂದ ತನ್ನ ತಂಡದ ಜತೆಗೂಡಿ ದರೋಡೆ ಮಾಡಿತ್ತು.

ಭೇದಿಸಿದ್ದು ಹೇಗೆ ?

ಒಂದು ಸುಳಿವನ್ನೂ ಬಿಟ್ಟುಕೊಡದ ರೀತಿ ಈ ದರೋಡೆ ಎಸಗಲಾಗಿತ್ತು. ಆರೋಪಿಗಳಿಗಾಗಿ ದಾವಣಗೆರೆ ಪೊಲೀಸರು ದೇಶದ ಉದ್ದಗಲಕ್ಕೂ ಅಲೆದಾಡಿದ್ದರು. ಆದರೆ ಆರೋಪಿಗಳು ಗ್ಯಾಸ್ ಕಟರ್ ಜತೆ ತಂದು, ಬಳಸಿದ ಬಳಿಕ ಕೆರೆಗೆ ಬಿಸಾಡಿದ್ದ ಸಿಲಿಂಡರ್‌ನಿಂದ ಸುಳಿವು ಸಿಕ್ಕಿತು. ಸಿಲಿಂಡ‌ರ್ ಅನ್ನು ಶಿವಮೊಗ್ಗದಲ್ಲಿ ಪಡೆದಿದ್ದ ಆರೋಪಿಗಳು ಆ ವೇಳೆ ಆಧಾರ್ ಕಾರ್ಡ್ ನೀಡಿದ್ದರು. ಯಾವ ಅಂಗಡಿಗೆ ಸಿಲಿಂಡರ್ ಬಾಕಿ ಬರಬೇಕಿದೆ ಎಂಬ ತನಿಖೆಗೆ ಇಳಿದಾಗ ಆರೋಪಿಗಳ ಸುಳಿವು ಸಿಕ್ಕಿದೆ.

 

Related Articles

error: Content is protected !!