ಹಾಸನ : ನಗರದ ಯೊಯ್ಸಳ ನಗರ ಬಡಾವಣೆಯಲ್ಲಿ ಹಾಡಹಗಲೇ ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಶರಾಫತ್ ಅಲಿ (52ವರ್ಷ), ಆಸಿಫ್ (46ವರ್ಷ) ಮೃತರಾದವರು. ಶರಾಫತ್ ಆಲಿ ದೆಹಲಿ ಮೂಲದವನಾಗಿದ್ದು ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಾಗಿದ್ದಾನೆ. ಸ್ನೇಹಿತರಾದ ಇವರಿಬ್ಬರೂ ರಿಯಲ್ ಎಸ್ಟೇಟ್ ಮತ್ತು ಶುಂಠಿ ವ್ಯಾಪಾರ ಮಾಡುತ್ತಿದ್ದರು. ಇದೇ ವಿಚಾರವಾಗಿ ಇಬ್ಬರೂ ವ್ಯಾವಹಾರಿಕ ಮಾತುಕತೆಯಲ್ಲಿ ತೊಡಗಿದ್ದಾಗ ಮಾತಿನ ಚಕಮಕಿ ನಡೆದು ಜಗಳವಾಡಿದ್ದಾರೆ. ಕೆಲ ಹೊತ್ತಲ್ಲೇ ಇದು ವಿಕೋಪಕ್ಕೆ ತಿರುಗಿದ್ದು, ಆಸಿಫ್ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಶರಾಫತ್ ಆಲಿಗೆ ಶೂಟ್ ಮಾಡಿದ್ದಾನೆ. ನಂತರ ಆತನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದ್ದು ಈ ಕುರಿತು ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಇವರಿಬ್ಬರೂ ಕಾರಿನಲ್ಲಿ ಕುಳಿತು ವಾಗ್ವಾದ ನಡೆಸುತ್ತಿದ್ದುದನ್ನು ಕೆಲವು ಸ್ಥಳೀಯರು ನೋಡಿದ್ದಾರೆ. ಬಳಿಕ ಗುಂಡಿನ ಸದ್ದು ಕೇಳಿ ಬಂದ ಕೂಡಲೇ ಅಕ್ಕಪಕ್ಕದವರು ಓಡಿ ಬಂದು ನೋಡಿದಾಗ ಆಸಿಫ್ ಕಾರಿನೊಳಗೆ ಹಾಗೂ ಶರಾಫತ್ ಆಲಿ ಕಾರಿನ ಹೊರಭಾಗ ಗುಂಡು ಹಾರಿದ ಸ್ಥಿತಿಯಲ್ಲಿ ಸತ್ತು ಬಿದ್ದಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಹಾಗೂ ಬಡಾವಣೆ ಠಾಣೆ ಪೊಲಿಸರು ಭೇಟಿನೀಡಿ ಪರಿಶಿಲಿಸಿ ಘಟನೆ ಕುರಿತು ಮಾಹಿತಿ ಪಡೆದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಸಾಕ್ಷ್ಯ ಕಲೆ ಹಾಕಿದ್ದಾರೆ.

