ದಾವಣಗೆರೆ : ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಬಿ.ಸಿ.ಪಾಟೀಲ ಅವರ ಹಿರಿಯ ಅಳಿಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ರಸ್ತೆ ಬದಿ ಕಾರಿನಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ವೈಯಕ್ತಿಕ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತ ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಹಾವೇರಿ ಜಿಲ್ಲೆ ಹಿರೇಕೆರೂರಿನ ಕೆ.ಜಿ.ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು.
ಬಿ.ಸಿ. ಪಾಟೀಲರ ಹಿರಿಯ ಪುತ್ರಿ ಸೌಮ್ಯರನ್ನು ಕೆ.ಜಿ.ಪ್ರತಾಪ್ ಕುಮಾರ್ ಮದುವೆಯಾಗಿದ್ದರು. ಸೋಮವಾರ ಬೆಳಗ್ಗೆ ಹಿರೇಕೆರೂರಿನಿಂದ ಶಿವಮೊಗ್ಗಕ್ಕೆ ಪ್ರತಾಪ್ ಕುಮಾರ್ ಒಬ್ಬರೇ ಹೊರಟಿದ್ದರು. ಮಾರ್ಗ ಮಧ್ಯೆ ಹೊನ್ನಾಳಿ ತಾಲೂಕು ಅರಕೆರೆ ಗ್ರಾಮದ ಬಳಿ ಅರಣ್ಯಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ ಪ್ರತಾಪ್ ಕುಮಾರ್, ತಮ್ಮ ಜೊತೆ ತಂದಿದ್ದ ಕ್ರಿಮಿನಾಶಕವನ್ನು ಕಾರಿನಲ್ಲೇ ಸೇವಿಸಿದ್ದರು. ತಾವು ವಿಷ ಸೇವಿಸಿರುವ ಕುರಿತು ಕುಟುಂಬ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದ್ದು, ಶಿವಮೊಗ್ಗ ರಸ್ತೆಯಲ್ಲಿ ಅವರಿಗಾಗಿ ಹುಡುಕಾಟ ನಡೆದಿತ್ತು
ಈ ಮಧ್ಯೆ ತೀವ್ರ ಅಸ್ವಸ್ಥಗೊಂಡು ಕಾರಿನಲ್ಲಿ ಒದ್ದಾಡು ತ್ತಿದ್ದ ಪ್ರತಾಪ್ ಅವರನ್ನು ಪೊಲೀಸರು ತಕ್ಷಣ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಂಜೆ 4.30ರ ಸುಮಾರಿಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆ ಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಆತ್ಮಹತ್ಯೆಗೆ ಸಂಬಂಧಿಸಿ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.