ಕುಂದಾಪುರ : ಕುಂದಾಪುರ ನಗರದ ವೆಸ್ಟ್‌ಬ್ಲಾಕಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿನ ಮನೆಯ ಎದುರಿನ ಬಾಗಿಲ ಬೀಗವನ್ನು ಒಡೆದು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ನಡೆದಿದೆ ಕುಂದಾಪುರದ ವೆಸ್ಟ್ ಬ್ಲಾಕ್ ನಿವಾಸಿ ರೋಹಿತ್ ಎಂಬುವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಊರಿಗೆ ಬಂದು ಸಂಸಾರ ಸಮೇತ ಮೇ 21ರಂದು ಕುಂದಾಪುರದಲ್ಲಿರುವ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು.
ಜು. 19 ಬೆಳಿಗ್ಗೆ 11.00 ಗಂಟೆಗೆ ರೋಹಿತ್ ಅವರಿಗೆ ಮಾವ ಜನಾರ್ದನ್ ಕರೆ ಮಾಡಿ ಮನೆಯ ಬಾಗಿಲನ್ನು ಯಾರೋ ಒಡೆದಿರುವುದಾಗಿ ತಿಳಿಸಿದ್ದರು. ಮನೆಯ ಎದುರಿನ ಬಾಗಿಲ ಬೀಗವನ್ನು ಒಡೆದು ಮನೆಯ ಒಳಗಿನ ರೂಮಿನ ಕಪಾಟಿನಲ್ಲಿದ್ದ ಮಗುವಿನ ಎರಡು ಚಿನ್ನದ ಚೈನ್, ಎರಡು ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಟಿಕ್ಕಿ, ಬೆಳ್ಳಿಯ 2 ಸಣ್ಣಕಾಲು ದೀಪ, ಬೆಳ್ಳಿಯ 2 ಹರಿವಾಣ, ಸಣ್ಣ ಸಣ್ಣ ಎಂಟು ಬೆಳ್ಳಿಯ ದೀಪಗಳು, ಒಂದು ಬೆಳ್ಳಿಯ ಚೆಂಬು ಹಾಗೂ 10 ಸಾವಿರ ನಗದು ಸೇರಿದಂತೆ ಒಟ್ಟು ಅಂದಾಜು 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

