ಉಡುಪಿ : ಇಲ್ಲಿನ ಚಿತ್ತರಂಜನ್ ಸರ್ಕಲ್ ಬಳಿ ಇರುವ ಸಬೀರ್ ಅಲಿ ಮಲ್ಲಿಕ್ ಅವರ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ಚಿನ್ನವನ್ನೇ ಕದ್ದುಕೊಂಡು ಪರಾರಿಯಾದ ಘಟನೆ ನಡೆದಿದೆ. ಸೋಮೇನ್ ಡೋಲುಯಿ ಚಿನ್ನದೊಂದಿಗೆ ನಾಪತ್ತೆಯಾಗಿರುವ ಕೆಲಸಗಾರ.
ಸೋಮೇನ್ ಡೋಲುಯಿಯನ್ನು ಸೆ.20 ರಂದು ಚಿನ್ನದ ಕುಸುರಿ ಕೆಲಸಕ್ಕೆ ಸಬೀರ್ ಸೇರಿಸಿಕೊಂಡಿದ್ದರು. ಸೆ.20ರಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಆತ ಕೆಲಸ ಮಾಡಿ ಊಟಕ್ಕೆ ತೆರಳಿದ್ದ ಮಧ್ಯಾಹ್ನದ ಬಳಿಕ ಆತನಿಗೆ ಜುಮ್ಮಿಯ ಕೆಳಗೆ ಗುಂಡು ಅಳವಡಿಸಲು ಚಿನ್ನದ ಗಟ್ಟಿ ನೀಡಿ ಸಬೀರ್ ಅವರು ಊಟಕ್ಕೆ ತೆರಳಿದ್ದರು. ಸಂಜೆ 5.00 ಕ್ಕೆ ಆತನಿಗೆ ಚಿನ್ನದ ಕೆಲಸದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಅಂಗಡಿಗೆ ಬಂದು ನೋಡಿದಾಗ ಆತ ಅಂಗಡಿಯಲ್ಲಿ ಇರಲಿಲ್ಲ. ಆತ ಕೆಲಸ ಮಾಡುತ್ತಿದ್ದ ಡ್ರಾವರ್ ಪರಿಶೀಲಿಸಿದಾಗ ಆತನಿಗೆ ಚಿನ್ನದ ಕುಸುರಿ ಕೆಲಸಕ್ಕೆ ನೀಡಿದ್ದ 136.240 ಗ್ರಾಂ ತೂಕದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.