ಮೂಲ್ಕಿ : ಆಸ್ತಿ ಪಹಣಿ ಪತ್ರದಲ್ಲಿ ವಾರಸುದಾರರ ಹೆಸರು ಸೇರ್ಪಡೆಗೆ 4 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಗುರುವಾರ ಸುರತ್ಕಲ್ ನಲ್ಲಿ ಹಣ ಸೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಅಜ್ಜಿ ಪದ್ಮಾವತಿ ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಪಿರ್ಯಾದಿದಾರರು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗಾಗಿ ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ಕಡತ ಬಂದಿದ್ದು, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆಯಲು ಡಿ.9ರಂದು ಪಿರ್ಯಾದಿದಾರರು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿದಾಗ 4 ಲಕ್ಷ ರೂಪಾಯಿ ಕೊಟ್ಟರೆ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಗುರುವಾರ ಲಂಚದ ಹಣವನ್ನು ಸ್ವೀಕರಿಸುವಾಗ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್‌ಪಿ ಎಂ.ಎ ನಟರಾಜ್, ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

