ಕುಂದಾಪುರ : “ಮನುಷ್ಯನ ಸಂಶೋಧನೆಗಳಿಗೆ ಮಿತಿ ಎಂಬುದಿಲ್ಲ, ಪ್ರತಿದಿನ ಹೊಸ ಹೊಸ ಆವಿಷ್ಕಾರಗಳನ್ನು ನಾವು ನೋಡಲು ಸಾಧ್ಯ. ಇಂತಹ ಆವಿಷ್ಕಾರಗಳನ್ನು ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಹಾಗು ಇಂತಹ ಆವಿಷ್ಕಾರಗಳಿಂದ ಮುಂದೆ ಆಗಬಹುದಾದ ತೊಂದರೆಗಳಿಗೆ ಇವಾಗಲೇ ಸೂಕ್ತ ಕಾನೂನುಗಳನ್ನು ರಚಿಸಿ ನಿಯಂತ್ರಿಸುವ ಅವಶ್ಯಕತೆ ಇದೆ. ಹಾಗಾಗಿ ಕೃತಕ ಬುದ್ಧಿ ಮತ್ತೆಯನ್ನು ಬಳಸುವಾಗ ಸೂಕ್ತ ಮುನ್ನೆಚ್ಚರಿಕೆ ಅವಶ್ಯಕ ಎಂದು ವಿ ಮೋಹನ ರಾವ್, ನಿವೃತ್ತ ಉಪ ಮುಖ್ಯ ಪ್ರಬಂಧಕರು, ಬ್ಯಾಂಕ್ ಅಪ್ ಇಂಡಿಯಾ, ಇವರು ತಿಳಿಸಿದರು. ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ಎಂ.ಕಾಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ, ಕೃತಕ ಬುದ್ಧಿ ಮತ್ತೆ: ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿ ವಿದ್ಯಾರ್ಥಿಗಳು ತಾಂತ್ರಿಕ ಲೋಕದಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಮನಗಂಡು, ಅವುಗಳನ್ನು ತಿಳಿದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು, ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ವೈದ್ಯ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಕಾರ್ತಿಕ ಪೈ, ಅತಿಥಿ ಉಪನ್ಯಾಸಕಿ ಉಜ್ವಲಾ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಜಿ. ಎಸ್. ಅಶ್ವಿನಿ ಉಪಸ್ಥಿತರಿದ್ದರು.ನಿರೀಕ್ಷಾ ದ್ವಿತೀಯ ಎಂ.ಕಾಂ. ಮತ್ತು ತಂಡದವರು ಸ್ವಾಗತಿಸಿದರು, ವಿಶಾಲಾಕ್ಷಿ ದ್ವಿತೀಯ ಎಂ.ಕಾಂ. ವಂದಿಸಿದರು, ಆಶ್ರಯ ದ್ವಿತೀಯ ಎಂ.ಕಾಂ. ಕಾರ್ಯಕ್ರಮ ನಿರೂಪಿಸಿದರು. ಸಂತೋಷ ನಾಯ್ಕ ಹೆಚ್, ಸಂಚಾಲಕರು, ಸ್ನಾತಕೋತ್ತರ ವಿಭಾಗ, ಕಾರ್ಯಕ್ರಮ ಸಂಘಟಿಸಿದರು.