Home » ಕೌಶಲದಿಂದ ಉತ್ತಮ ಬೋಧನೆ ಮಾಡಲು ಸಾಧ್ಯ
 

ಕೌಶಲದಿಂದ ಉತ್ತಮ ಬೋಧನೆ ಮಾಡಲು ಸಾಧ್ಯ

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ|ರಮೇಶ್ ಶೆಟ್ಟಿ

by Kundapur Xpress
Spread the love

ಕುಂದಾಪುರ : ಶಿಕ್ಷಣ ನಿಂತ ನೀರಲ್ಲ, ಪ್ರತೀ ದಿನವೂ ಹೊಸ ಹೊಸ ಬದಲಾವಣೆಯೊಂದಿಗೆ ನವೀನ ಚಿಂತನೆಗಳೊಂದಿಗೆ ಸಾಗುತ್ತಿದೆ.ಒಂದು ಸುಭದ್ರವಾದ ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಉತ್ತಮವಾದ ಶಿಕ್ಷಕ ಮಾತ್ರ ಅತ್ಯುತ್ತಮವಾದ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸಾಧ್ಯವಾದ್ದರಿಂದ ಈ ಸಮಾಜವು ಯಾವಾಗಲೂ ಸಮರ್ಥವಾದ ಶಿಕ್ಷಕ ವರ್ಗವನ್ನು ಸದಾ ನಿರೀಕ್ಷಿಸುತ್ತದೆ. ಹಾಗಾಗಿ ಶಿಕ್ಷಕರಿಗೆ ಕಾಲ ಕಾಲಕ್ಕೆ ಅಗತ್ಯವಾದ ತರಬೇತಿಗಳನ್ನು ನೀಡಿದಾಗ ಶಿಕ್ಷಕರು ಬೋಧನೆಗೆ ಸಂಬಂಧಿಸಿದ ಹಲವಾರು ಕೌಶಲಗಳನ್ನು ಪಡೆದು ಉತ್ತಮ ಗುಣಮಟ್ಟದ ಬೋಧನೆ ಮಾಡಲು ಸಾಧ್ಯವಾಗಿ ಮಕ್ಕಳು ಕಲಿಕೆಯಲ್ಲಿ ಸರ್ವಾಂಗೀಣ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ|ರಮೇಶ್ ಶೆಟ್ಟಿ ಹೇಳಿದರು.

ಅವರು ವಿದ್ಯಾರಣ್ಯ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರು ದಿನಗಳು ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಬೋಧನೆಗೆ ಅಗತ್ಯವಾದ ಕೌಶಲಗಳನ್ನು ಕಲಿಸಲಾಯಿತು. ಮೊದಲ ದಿನದ ಕಾರ್ಯಾಗಾರದಲ್ಲಿ ಅಕಾಡೆಮಿಕ್ ಕೌನ್ಸಿಲ್ ಕನ್ನಲೆಂಟ್ ಅಂಡ್ ಸಾಫ್ಟ್ ಸ್ಕಿಲ್ಸ್ ತರಬೇತುದಾರರಾಗಿರುವ ಅರುಣ ಎಸ್‌.ಅವರು ಶಿಕ್ಷಕರಿಗೆ ಯಶಸ್ವಿ ತರಗತಿ ನಿರ್ವಹಣೆಯ ಕೌಶಲಗಳನ್ನು ಪರಿಚಯಿಸಿದರು.ಎರಡು ಮತ್ತು ಮೂರನೇ ದಿನದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ತರಬೇತುದಾರರಾದ ಅಶೋಕ್ ತೆಕ್ಕಟ್ಟೆ ಅವರು ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ಕೌಶಲಗಳು ಕುರಿತು ತರಬೇತಿ ನೀಡಿದರು.ಮೂರು ದಿನಗಳು ನಡೆದ ಕಾರ್ಯಾಗಾರದಲ್ಲಿ ಶಿಕ್ಷಕ-ಶಿಕ್ಷಕಿ ಯರು ಬಹಳ ಉತ್ಸುಕತೆಯಿಂದ ಭಾಗವಹಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕಿ ಅಕ್ಷತಾ ನಿರೂಪಿಸಿದರು.

 

Related Articles

error: Content is protected !!