ಎಷ್ಟೋ ವೇಳೆ ನಮ್ಮನ್ನು ಆಳುವುದು ನಮ್ಮ ಮನಸ್ಸೇ ಎಂಬಷ್ಟು ಗಟ್ಟಿಯಾದ ಅಭಿಪ್ರಾಯವನ್ನು ನಾವು ತಳೆಯುತ್ತೇವೆ. ಎಂದರೆ ನಾವು ಬೇರೆ, ನಮ್ಮ ಮನಸ್ಸು ಬೇರೆ ಎಂದು ನಾವು ಒಪ್ಪಿಕೊಂಡ ಹಾಗಾಯಿತು! ಹಾಗಾದರೆ ನಾವು ಎಂದರೆ ಯಾರು? ಮನಸ್ಸು ಎಂದರೆ ಯಾರು? ನಮ್ಮನ್ನು ಹೇಗೆ ಬೇಕೋ ಹಾಗೆ ಕುಣಿಸುವ ಮನಸ್ಸಿಗೆ ಪ್ರತ್ಯೇಕವಾದ ಅಸ್ತಿತ್ವ ಇದೆಯೇ? ನಮ್ಮಲ್ಲಿನ ಸಮಸ್ತ ಕಾಮನೆಗಳ ವಾಸಸ್ಥಾನಗಳು ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಎಂದು ನಾವು ಈಗಾಗಲೇ ತಿಳಿದೆವಷ್ಟೆ? ಈ ಕಾಮನೆಗಳೇ ನಮ್ಮ ಇಂದ್ರಿಯಗಳನ್ನು, ಮನಸ್ಸನ್ನು ಮತ್ತು ಬುದ್ಧಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಮ್ಮನ್ನು ಹೇಗೆ ಬೇಕೋ ಹಾಗೆ ಕುಣಿಸುವ ಮಾಯಕ ಶಕ್ತಿಯನ್ನು ಹೊಂದಿವೆ. ನಿಜಕ್ಕಾದರೆ ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಮನಸ್ಸಿಗಿಂತ ಬುದ್ಧಿ ಹೆಚ್ಚಿನದು ಮತ್ತು ಬುದ್ಧಿಗಿಂತಲೂ ಎತ್ತರದಲ್ಲಿ, ಗುರುವಿನ ಸ್ಥಾನದಲ್ಲಿರುವುದು ಆತ್ಮ. ಆತ್ಮರೂಪೀ ದೇವನು ಹೃದಯವೆಂಬ ಗರ್ಭಗೃಹದಲ್ಲಿ ಅಧಿಷ್ಠಾನನಾಗಿದ್ದಾನೆ. ಆ ಗರ್ಭಗೃಹದ ಹೊರಗಿನ ಸುತ್ತುಗಳು ಬುದ್ಧಿ, ಮನಸ್ಸು, ಇಂದ್ರಿಯಗಳೆಂಬ ಬಾಗಿಲುಗಳಿಂದ ಮುಚ್ಚಲ್ಪಟ್ಟಿವೆ. ಆ ಬಾಗಿಲುಗಳಿಗೆ ಕಾಮನೆಯೆಂಬ ಬೀಗವನ್ನು ಹಾಕಿ ಆ ಬಾಗಿಲುಗಳನ್ನು ಜಡಿಯಲಾಗಿದೆ. ಈ ಬೀಗವನ್ನು ತೆಗೆಯುವ ಶಕ್ತಿ ಮತ್ತು ಯುಕ್ತಿ ಎರಡೂ ನಮ್ಮಲ್ಲಿರುವುದು ಅಗತ್ಯ. ಅದಕ್ಕೇ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: ಇಂದ್ರಿಯಗಳನ್ನು ನಿಗ್ರಹಿಸಿ ಕಾಮರೂಪೀ ವೈರಿಯನ್ನು ಸಂಹಾರ ಮಾಡಲು ಶಕ್ತಿ ಇಲ್ಲವೆಂದು ನೀನು ಭಾವಿಸಿದರೆ ಅದು ನಿನ್ನದೇ ತಪ್ಪು. ಅದು ನಿನ್ನೊಳಗೇ ಇದೆ ಎಂಬ ಸತ್ಯವನ್ನು ನೀನು ಅರಿಯುವುದು ಅಗತ್ಯ. ಈ ಸತ್ಯವನ್ನು ಅರಿಯಲು ಬೇಕಾದದ್ದು ಆತ್ಮಜ್ಞಾನ. ಆ ಜ್ಞಾನವನ್ನು ಪಡೆಯುವುದೇ ನಿಜವಾದ ವಿದ್ಯೆ. ಉಳಿದವೆಲ್ಲ ಅವಿದ್ಯೆ.