- ಹುಟ್ಟು–ಸಾವಿನ ಗೂಢಾರ್ಥ
ದೇಹದ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡು ಬಾಳುವುದೆಂದರೆ ಜೈವಿಕ ಮೂಲ ಪ್ರಜ್ಞೆಯ ಇತಿಮಿತಿಯ ಒಳಗೇ ಬದುಕುವುದು ಎಂದು ಅರ್ಥ. ಅಂತಹ ಬದುಕಿನಲ್ಲಿ ದೇಹವೇ ಸರ್ವಸ್ವ. ಅಲ್ಲಿ ತರ್ಕ ಮತ್ತು ಬುದ್ಧಿಯ ನೆಲೆಯಲ್ಲಿ ಯಾವುದೇ ವಿಚಾರ–ವಿಮರ್ಶೆಗೆ ಅವಕಾಶವಿಲ್ಲ. ಹಾಗಾಗಿ ಸಾವಿನ ಕಲ್ಪನೆ ಬಹಳ ಭಯಾನಕವೂ ಘೊರವೂ ಆಗಿರುತ್ತದೆ. ಮರಣದ ಕುರಿತಾಗಿ ಸದಾ ಅವ್ಯಕ್ತ ಭಯ ಕಾಡುತ್ತಲೇ ಇರುತ್ತದೆ. ಪರಿಣಾಮವಾಗಿ ಬದುಕು ತೀವ್ರ ಸ್ವಾರ್ಥಪರವಾಗಿರುತ್ತದೆ. ಮೋಹ ನೆರಳಿನಂತೆ ಹಿಂಬಾಲಿಸುತ್ತದೆ. ದುಃಖ, ಅತೃಪ್ತಿ, ಅಸಹನೆ, ಜುಗುಪ್ಸೆಯೇ ಬಾಳಿನಲ್ಲಿ ತುಂಬಿಕೊಳ್ಳುತ್ತದೆ. ಇದರ ನಿವಾರಣೋಪಾಯ ಹೇಗೆ? ಪಂಚಭೂತಗಳಿಂದ ಉಂಟಾದಂತಹ ಈ ದೇಹ ಒಂದಲ್ಲ ಒಂದು ದಿನ ಮತ್ತೆ ಪಮಚಭೂತಗಳನ್ನು ಸೇರುವುದು ನಿಶ್ಚಿತ. ಹುಟ್ಟಿದವರಿಗೆ ಮರಣ ನಿಶ್ಷಿತ. ಮರಣ ಹೊಂದಿದವರು ತಮ್ಮ ಸಂಚಿತ ಕರ್ಮಗಳಿಗೆ ಅನುಗುಣವಾಗಿ ಮತ್ತೆ ಜನ್ಮಪಡೆಯುವೂದೂ ನಿಶ್ಚಿತ. ಹೀಗೆ ಹೇಳುವಾಗ ಮತ್ತೂ ಒಂದು ಸತ್ಯವನ್ನು ತಿಳಿದಿರುವುದು ಅಗತ್ಯ ಎಂದು ಗೀತೆಯಲ್ಲಿ ಕೃಷ್ಣ ಎಚ್ಚರಿಸುತ್ತಾನೆ. ಎಲ್ಲಾ ಪ್ರಾಣಿಗಳೂ ಹುಟ್ಟುವುದಕ್ಕೆ ಮುಂಚೆ ಅಗೋಚರವಾಗಿದ್ದವು. ಸತ್ತ ಬಳಿಕವೂ ಅವು ಅಗೋಚರವಾಗುವವು. ಕೇವಲ ಮಧ್ಯದಲ್ಲಿ ಮಾತ್ರವೇ ಅವು ಗೋಚರಿಸುವವು. ಇದನ್ನು ತಿಳಿದುಕೊಂಡರೆ ಹುಟ್ಟು ಮತ್ತು ಸಾವಿನ ಗೂಢಾರ್ಥ ತೆರೆದುಕೊಳ್ಳುತ್ತದೆ. ಸ್ವಾರ್ಥ ಮತ್ತು ಮೋಹದ ಬಂಧನದಿಂದ ಬಿಡುಗಡೆ ದೊರಕುತ್ತದೆ. ಬದುಕಿನ ಉದ್ದೇಶ ಮತ್ತು ಗುರಿ ಸ್ಪಷ್ಟವಾಗುತ್ತದೆ.