ಮನಸ್ಸನ್ನು ಅತ್ಯಂತ ಪ್ರಸನ್ನ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಬದುಕಿನ ಬಲು ದೊಡ್ಡ ತಪಸ್ಸು. ನಮ್ಮ ದಿನನಿತ್ಯದ ಕೆಲಸಗಳನ್ನು ದಕ್ಷ ರೀತಿಯಿಂದ ತೃಪ್ತಿಕರವಾಗಿ ಮಾಡಲು ಮನಸ್ಸು ನಿರುದ್ವಿಗ್ನವಾಗಿರುವುದು ಮುಖ್ಯ. ದೇವರ ಭಜನೆಯನ್ನು ದಿನನಿತ್ಯ ಮಾಡುವಲ್ಲಿ ಉಂಟಾಗುವ ಬಹಳ ದೊಡ್ಡ ಪ್ರಯೋಜನವೆಂದರೆ ಮನಸ್ಸು ಸದಾ ಪ್ರಫುಲ್ಲವಾಗಿರುವುದು. ನಿಜಕ್ಕಾದರೆ ಮನಸ್ಸನಿನ ಸಂತೋಷಕ್ಕೆ ಮಿಗಿಲಾದ ಸಂತೋಷ ಬೇರೊಂದಿಲ್ಲ. ಮನಸ್ಸು ಪ್ರಫುಲ್ಲವೈ ಆನಂದದಾಯಕವೂ ಆಗಿದ್ದರೆ ದಿನ ನಿತ್ಯದ ಎಲ್ಲ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವ ಉತ್ಸಾಹ, ಉಲ್ಲಾಸ ಮೂಡುತ್ತದೆ. ಅದಿಲ್ಲದೆ ಮನಸ್ಸು ಮುದುಡಿಕೊಂಡಿದ್ದು ನಿರುತ್ಸಾಹದಿಂದ ತುಂಬಿಕೊಂಡಿದ್ದರೆ ಯಾವ ಕೆಲಸವನ್ನೂ ಚೆನ್ನಾಗಿ ಮತ್ತು ದಕ್ಷತೆಯಿಂದ ಮಾಡಲಾರೆವು. ದಿನಂಪ್ರತಿ ಬೆಳಿಗ್ಗೆ ಕೈಗೊಳ್ಳುವ ದೇವತಾ ಪ್ರಾರ್ಥನೆಯಿಂದ ಸಿಗುವ ಮನೋಲ್ಲಾಸ, ಸ್ಫೂರ್ತಿ, ಆತ್ಮವಿಶ್ವಾಸ ನಿಜಕ್ಕೂ ಅದ್ಭುತ. ಬೆಳಗ್ಗೆ ಏಳುತ್ತಲೇ ಎರಡೂ ಹಸ್ತಗಳನ್ನೂ ಕಣ್ಣ ಮುಂದೆ ತಂದಿರಿಸಿ ‘ಕರಾಗ್ರೇ ವಸತೇ ಲಕ್ಷ್ಮೀ……..’ ಎಂಬ ಪುಟ್ಟ ಶ್ಲೋಕವನ್ನು ಪಠಿಸುವುದರಲ್ಲಿ ಸಿಗುವ ಆತ್ಮಾನಂದ, ಸಂತೋಷ ಅಪಾರ. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ಯಾವಾಗಲೂ ಆನಂದದಿಂದ ಇದ್ದರೆ, ಮಂದಹಾಸದಿಂದ ಇದ್ದರೆ, ಅದು ಪ್ರಾರ್ಥನೆಗಿಂತ ಬೇಗನೆ ನಮ್ಮನ್ನು ದೇವರ ಬಳಿಗೆ ಕರೆದೊಯ್ಯುವುದು. ನಿರಾಶರಾಗಿ ನಿಷ್ಕ್ರಿಯರಾಗಿರುವವರು ದೇವರನ್ನೇ ಏಕೆ, ಯಾರನ್ನೇ ಆದರೂ ಹೇಗೆ ತಾನೆ ಪ್ರೀತಿಸಬಲ್ಲರು?’ ಯಾರು ತಮ್ಮನ್ನು ದುಃಖಿಗಳು, ದುರ್ಬಲರು ಎಂದು ಭಾವಿಸಿ ನಿರಾಶಾಭಾವವನ್ನೇ ಅಪ್ಪಿಕೊಂಡು ಬಾಳುವರೋ ಅವರಿಗಿಂತ ದುಃಖಿಗಳು ಪ್ರಪಂಚದಲ್ಲಿ ಬೇರೆ ಯಾರು ಇಲ್ಲ. ಅಂತಹವರ ಮನಸ್ಸಿನಲ್ಲಿ ಕೀಳಿರಿಮೆ ಮತ್ತು ಸ್ವಾರ್ಥವೇ ತುಂಬಿರುವುದರಿಂದ ಇತರರಿಗೆ ಕೆಡುಕನ್ನು ಉಂಟುಮಾಡಲೂ ಅವರು ಮುಂದಾಗುತ್ತಾರೆ. ಅಂತಹವರು ಎಂದೂ ದೇವರ ಹತ್ತಿರಕ್ಕೆ ಬರಲಾರರು.