ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಪರಮಭಕ್ತರಿಗೆ ಹೇಳಿರುವ ರಹಸ್ಯವೇ ಇದು: ‘ನಿನ್ನನ್ನು ನೀನು ಗೆಲ್ಲಲು ಮತ್ತು ನಿನ್ನಲ್ಲಿ ನನ್ನನ್ನು ಕಾಣಲು ಅತ್ಯಂತ ಸುಲಭದ ಉಪಾಯವಿದೆ. ಅದೆಂದರೆ ನೀನು ನನ್ನಲ್ಲೇ ವಿಶ್ವಾಸವಿಟ್ಟು ನನಗೆ ಶರಣು ಬಾ ನಿನ್ನ ಹೃದಯ ದೇಗುಲದಲ್ಲಿ ನನ್ನ ಕುರಿತಾಗಿ ಭಕ್ತಿಯ ಜ್ಯೋತಿಯನ್ನು ಬೆಳಗು. ನಿನ್ನ ಶ್ರದ್ಧೆ ಹಾಗೂ ವಿಶ್ವಾಸದ ಬಲದಲ್ಲಿ ಅದು ನಂದಾದೀಪವಾಗಲಿ, ಆ ದಿವ್ಯ ಜ್ಯೋತಿಯ ಪ್ರಖರ ಶಾಖದಲ್ಲಿ ನಿನ್ನೊಳಗಿನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಶತ್ರುಗಳು ನಾಶವಾಗಿ ಹೋಗುವರು. ನಿನ್ನ ಹೃದಯಮಂದಿರವು ಸಂಪೂರ್ಣವಾಗಿ ಪರಿಶುದ್ಧವಾಗುವುದು. ಆಗಲೇ ನಿನ್ನಲ್ಲಿ ನೀನು ನನ್ನನ್ನು ಕಾಣುವೆ; ನನ್ನನ್ನೇ ಹೊಂದುವೆ.” ಶ್ರೀಕೃಷ್ಣನ ಈ ಮಾತುಗಳು ನಮಗೆ ದಾರಿದೀಪವಾಗಿವೆ. ಆತ್ಮವಿಶ್ವಾಸವನ್ನು ಮೂಡಿಸುವಂತಿವೆ. ನಮ್ಮೊಳಗೆ ಮನೆಮಾಡಿಕೊಂಡಿರುವ ‘ನಾನು, ನಾನೆಂಬ ಅಹಂಕಾರ’ದ ಫಲವಾಗಿಯೇ ನಮಗೆ ನಮ್ಮೊಳಗಿರುವ ದೇವರು ಗೋಚರವಾಗುವುದಿಲ್ಲ. ಆ ಅಹಂಕಾರವನ್ನು ತೊಡೆದು ಹಾಕುವುದೇ ನಮ್ಮ ಮೊದಲ ಕೆಲಸವಾಗಬೇಕು. ಆಗ ನಮ್ಮೊಳಗೆ ಮಾತ್ರವಲ್ಲ ಇತರರೊಳಗೂ ಇರುವ ದೇವರು ಗೋಚರ ವಾಗುವನು. ‘ನಿನ್ನ ಅನುಗ್ರಹವಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು’ ಎಂಬ ಸತ್ಯದ ಅರಿವು ಆಗಬೇಕಾದರೆ ನಮ್ಮೊಳಗಿನ ಅಹಂಕಾರವು ಪೂರ್ತಿಯಾಗಿ ನಾಶವಾಗಬೇಕು. ದೇವರಿಗೆ ನಾವು ಸಂಪೂರ್ಣ ಶರಣಾಗತರಾದಾಗಲೇ ಇದು ಸಾಧ್ಯವಾಗುವುದು. ದೇವರಲ್ಲಿ ನಾವಿಡುವ ಭಕ್ತಿ, ನಿವೇದಿಸುವ ಪ್ರಾರ್ಥನೆ, ಭಜನೆ ಇತ್ಯಾದಿಗಳಿಂದ ನಮ್ಮೊಳಗಿನ ಅಹಂಕಾರವು ನಾಶವಾಗುವುದು. ‘ಇಸ್ಲಾಂ’ ಎಂಬ ಪವಿತ್ರ ಶಬ್ದದಲ್ಲೂ ಇದೇ ಅರ್ಥ ಹುದುಗಿದೆ. ದೇವರಲ್ಲಿ ಸಂಪೂರ್ಣ ಶರಣಾಗತಿ ಇಲ್ಲದೆ ದೇವರ ಸಾಕ್ಷಾತ್ಕಾರ ಆಗುವ ಸಂಭವವೇ ಇಲ್ಲ !