ದೇವರಲ್ಲಿ ನಾವು ಸಂಪೂರ್ಣವಾಗಿ ಶರಣಾಗತರಾಗಲು ನಮ್ಮ ದೇಹ, ಮನಸ್ಸು ಹಾಗೂ ಬುದ್ದಿಯನ್ನು ನಾವು ನಿರ್ಮಲವಾಗಿ ಇಟ್ಟುಕೊಳ್ಳುವುದು ಅಗತ್ಯ. ದೇಹವು ಸ್ವಚ್ಛವಾಗಿದ್ದರೆ ದೇಹದ ಆರೋಗ್ಯವು ಚೆನ್ನಾಗಿರುವುದು. ಉತ್ತಮ ದೇಹಾರೋಗ್ಯ ದಿಂದ ಮನಸ್ಸು ಸದಾ ಪ್ರಫುಲ್ಲವಾಗಿರುವುದು. ಆದುದರಿಂದ ದೇಹದ ಆರೋಗ್ಯವು ದೇವರನ್ನು ಕಾಣಲು ನಾವು ಮಾಡುವ ಪ್ರಯತ್ನದ ಮೊದಲ ಹೆಜ್ಜೆ ಎನ್ನಬೇಕು. ದೇಹದ ಆರೋಗ್ಯವನ್ನು ಕಾಪಾಡುವುದೆಂದರೆ ದೇಹದ ಹೊರಮೈ ಸೌಂದರ್ಯವನ್ನು ವರ್ಧಿಸುವುದಕ್ಕೆ ಪ್ರಾಧಾನ್ಯ ನೀಡುವುದು ಎಂದು ಸರ್ವಥಾ ಅರ್ಥವಲ್ಲ, ದೇಹವನ್ನು ನಿರೋಗಿಯಾಗಿಡಲು ಅದರ ಸ್ವಚ್ಛತೆಗೆ, ಸದುಪಯೋಗಕ್ಕೆ ಪ್ರಾಧಾನ್ಯ ನೀಡುವುದು ಅಗತ್ಯ. ದಿನನಿತ್ಯದ ಸ್ನಾನಾದಿ ಕರ್ಮಗಳು, ವ್ಯಾಯಾಮ, ದೈಹಿಕ ಕಸರತ್ತುಗಳು, ಯೋಗಾಭ್ಯಾಸ, ಕಾಲ್ನಡಿಗೆ, ವಾಯುವಿಹಾರ ಹೀಗೆ ನಾನಾ ರೀತಿ ಒಳ್ಳೆಯ ಅಭ್ಯಾಸಗಳ ಮೂಲಕ ದೇಹದ ಆರೋಗ್ಯವನ್ನು ಕಾಪಾಡುವುದು ಅಗತ್ಯ. ದೇಹದ ಆರೋಗ್ಯವನ್ನು ಕಾಪಾಡುವ ಈ ಪ್ರಯತ್ನದಲ್ಲಿ ದೇಹದ ಸಹಜ ಸೌಂದರ್ಯವು ತನ್ನಿಂತಾನೇ ವರ್ಧಿಸುವುದು. ಆದರೆ ಈ ಸುಲಭೋಪಾಯಗಳ ಬದಲು ನಾವಿಂದು ಅನೇಕ ಬಗೆಯ ಕೃತಕ ಸೌಂದರ್ಯವರ್ಧಕಗಳನ್ನು ಬಳಸಿ ಅತೀ ಸುಂದರ, ಸುಂದರಿಯರಾಗಿ ಕಾಣುವ ಹುನ್ನಾರದಲ್ಲಿ ದೇಹದ ಪ್ರಾಕೃತಿಕ ಸಹಜ ಸೌಂದರ್ಯಕ್ಕೆ ಮಸಿ ಬಳಿಯುತ್ತಿದ್ದೇವೆ. ಅತಿಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಮಾಡಲಾದ ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ವಿವಿಧ ಬಗೆಯ ಮಾರಕ ಚರ್ಮರೋಗಗಳಿಗೆ, ಕ್ಯಾನ್ಸರ್ ಮುಂತಾದ ಭಯಂಕರ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ದೇಹದ ಆರೋಗ್ಯವನ್ನು ವರ್ಧಿಸುವ ಬದಲು ಆಧುನಿಕ ಸೌಂದರ್ಯ ಪರಿಕಲ್ಪನೆಗೆ ಮಾರುಹೋಗಿ ದೇಹವನ್ನು ನಾನಾ ವ್ಯಾಧಿಗಳ ಉಗ್ರಾಣವನ್ನಾಗಿ ಮಾಡುತ್ತಿದ್ದೇವೆ. ದೇವರು ಮನೆಮಾಡುವುದು ನಿರೋಗಿಯಾದ ಶರೀರವೆಂಬ ಗುಡಿಯಲ್ಲೇ ವಿನಾ ರೋಗಗಳು ಮನೆಮಾಡಿ ಕೊಂಡಿರುವ ದೇಹದಲ್ಲಿ ಅಲ್ಲ!