ನಿಷ್ಕಾಮ ಕರ್ಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಮುಖ್ಯವಾಗಿ ನಾವು ಬೆಳೆಸಿಕೊಳ್ಳ ಬೇಕಾದದ್ದು ಸಾತ್ವಿಕ ಗುಣವನ್ನು. ತಾಮಸ ಹಾಗೂ ರಾಜಸ ಗುಣಗಳು ನಮ್ಮನ್ನು ಐಹಿಕ ಪ್ರಪಂಚಕ್ಕೆ ಗಟ್ಟಿಯಾಗಿ ಬಂಧಿಸುವುದರಿಂದ ನಾವು ಅನುದಿನವೂ ಕಾಮನೆಗಳ ಕಣಜವಾಗಿಯೇ ಉಳಿಯುವೆವು. ಪಂಚೇಂದ್ರಿಯಗಳ ದಾಸರಾಗಿ ಬದುಕುವೆವು. ನಾನು, ನನ್ನದು, ನನ್ನವರು ಎಂಬ ಸ್ವಾರ್ಥ ಭಾವನೆಯನ್ನೇ ಮೈಗೂಡಿಸಿಕೊಳ್ಳುವೆವು. ನಾವು ಸಾತ್ವಿಕರಾಗಲು ಪ್ರಯತ್ನಿಸಿದಷ್ಟೂ ನಮಗೆ ಇಂದ್ರಿಯಗಳ ಮೇಲೆ ಹತೋಟಿ ಲಭಿಸುವುದು. ಅಂತರ್‍ಮುಖಿಯಾಗಲು ಸಾಧ್ಯವಾದಲ್ಲಿ ಆಧ್ಯಾತ್ಮಿಕ ಪ್ರವೃತ್ತಿ ಬೆಳೆಯುವುದು. ನಮ್ಮ ಬದುಕಿನ ನಿಜವಾದ ಹೋರಾಟ ಯಾವುದು? ಇಂದ್ರಿಯ ಸುಖಗಳಲ್ಲಿ ನಮಗಿರುವ ಅತ್ಯಾಸಕ್ತಿಯನ್ನು ನಾಶ ಮಾಡುವುದೇ ಬದುಕಿನ ನಿಜವಾದ ಹೋರಾಟ ಎಂಬ ಸತ್ಯವನ್ನು ‘ವಿವೇಕವಾಣಿ‘ ನಮಗೆ ತಿಳಿಸುತ್ತದೆ. ಇಂದ್ರಿಯಗಳಿಂದ ನಾವು ಪಡೆಯುವ ಯಾವತ್ತೂಸುಖ ಕೇವಲ ಛಾಯಾ ಸುಖ. ಅದು ಕೇವಲ ಪ್ರತಿಬಿಂಬ. ನಿಜವಾದ ಸುಖವಲ್ಲ. ಆದರೆ ಐಹಿಕ ಜಗತ್ತಿಗೆ ಅಂಟಿಕೊಂಡಿರುವ ನಮಗೆ ಅದುವೇ ನಿಜವಾದ ಸುಖವೆಂಬ ಭ್ರಮೆ. ಹಾಗಾಗಿ ನಾವು ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಗೋಜಿಗೆ ಹೋಗುವುದಿಲ್ಲ. ಆದು ನಮಗೆ ಸಾಧ್ಯವೇ ಇಲ್ಲವೆಂಬ ನೇತ್ಯಾತ್ಮಕ ಭಾವನೆಯನ್ನೂ ನಾವು ಬೆಳೆಸಿಕೊಳ್ಳುವೆವು. ಆದುದರಿಂದಲೇ ನಾವು ದೇಹಪ್ರಜ್ಞೆಯಿಂದ ಪಾರಾಗಲಾರೆವು. ಸದಾ ದೈಹಿಕ ಅಸ್ತಿತ್ವದಿಂದಲೇ ನಮ್ಮನ್ನು ನಾವು ಗುರುತಿಸಿ ಕೊಳ್ಳುವುದರಿಂದ ದೇಹಾತೀತ ಪರಿಕಲ್ಪನೆ ನಮ್ಮ ಊಹೆಗೂ ನಿಲುಕದು. ಧ್ಯಾನಕ್ಕೆ ಕುಳಿತಾಗ ದೇಹವನ್ನು ಮರೆಯಲು ವಿಫಲರಾಗುವೆವು. ಮಗುವೊಂದು ಹುಟ್ಟಿದಾಗ ಸಂಭ್ರಮ ಪಡುವೆಯಾದರೂ ಸಾವೆಂಬ ಪರಮ ಸತ್ಯವನ್ನು ಅರಿಯಲು ಮುಂದಾಗಲಾರೆವು.