Home » ಅಜ್ಞಾನದ ಸಮಸ್ಯೆ
 

ಅಜ್ಞಾನದ ಸಮಸ್ಯೆ

by Kundapur Xpress
Spread the love

ಹೊರಗಿನ ಪ್ರಕೃತಿ ಹೇಗೋ ಹಾಗೆ ನಮ್ಮ ಒಳ-ಹೊರಗಿನ ಪ್ರಕೃತಿ, ಬಾಹ್ಯ ಜಗತ್ತು ಹೇಗೆ ಕ್ಷಣಕ್ಷಣಕ್ಕೆ ಬದಲಾವಣೆ ಹೊಂದುವುದೋ ಹಾಗೆಯೇ ನಮ್ಮ ಒಳಗೂ ಕ್ಷಣಕ್ಷಣಕ್ಕೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಶೈಶವ, ಬಾಲ್ಯ, ಯೌವನ, ಪ್ರೌಢ ಹಾಗೂ ವೃದ್ಧಾಪ್ಯದಲ್ಲಿ ನಮ್ಮ ಬಾಹ್ಯ ಸ್ವರೂಪವು ಪಡೆದುಕೊಳ್ಳುವ ಬದಲಾವಣೆಯನ್ನು ನಾವು ಊಹಿಸಲಾರೆವು. ನಮ್ಮ ದೇಹದ ಸ್ವರೂಪದಲ್ಲಾಗುವ ಬದಲಾವಣೆಗೆ ತಕ್ಕಂತೆ ನಮ್ಮ ಆಂತರಿಕ ಸ್ವರೂಪವು ಬದಲಾಗುತ್ತಲೇ ಹೋಗುತ್ತದೆ. ಆದರೂ ನಾವು ಅಹಂಕಾರವನ್ನು ಬಿಡುವುದಿಲ್ಲ. ನಾನು ನನ್ನದೆಂಬ ಮೋಹ, ಲೋಭ, ಮದ, ಮತ್ಸರಗಳನ್ನು ಬಿಡುವುದಿಲ್ಲ, ನಮ್ಮ ನಮ್ಮ ಅಹಂಕಾರದ ಮೂಲವೇ ನಮ್ಮ ಅಸ್ಥಿತೆಯ ಬಗ್ಗೆ ನಮಗಿರುವ ಪ್ರತ್ಯೇಕತಾ ಭಾವ, ನಮ್ಮ ಜ್ಞಾನ, ತಿಳಿವಳಿಕೆ, ಶೈಕ್ಷಣಿಕ ಪದವಿಗಳು, ಹುದ್ದೆ, ಅಂತಸ್ತು, ಐಶ್ವರ್ಯ, ಕೀರ್ತಿ ಮುಂತಾಗಿ ಎಲ್ಲವೂ ಐಡೆಂಟಿಟಿ(ಅಸ್ಥಿತೆ)ಯ ಚಿಹ್ನೆಗಳೆಂದು ನಾವು ಭಾವಿಸುತ್ತೇವೆ. ಆದರೆ ಅವೆಲ್ಲವೂ ನಮ್ಮ ಅಹಂಕಾರದ ಚಿಹ್ನೆಗಳು. ಇದರ ತೀವ್ರತೆಯಲ್ಲಿ ನಾವು ನಮ್ಮ ನಿಜ ಸ್ವರೂಪವನ್ನು ಮರೆಯುತ್ತೇವೆ. ಈ ಅಹಮಿಕೆಯ ಪ್ರಜ್ಞೆ ದೇವರು ಮತ್ತು ನಮ್ಮ ನಡುವೆ ಕಬ್ಬಿಣದ ಗೋಡೆಯನ್ನು ಕಟ್ಟುತ್ತದೆ. ನಾವು ದೇವರ ಅಂಶವೇ ಆಗಿದ್ದೇವೆ ಎಂಬ ಸತ್ಯವನ್ನು ತಿಳಿಯಲಾರದಷ್ಟು ಅಜ್ಞಾನ ನಮ್ಮನ್ನು ಆವರಿಸಿಕೊಂಡಿರುವುದರಿಂದಲೇ ವ್ಯಕ್ತಿ ವ್ಯಕ್ತಿಗಳನ್ನು ನಾವು ಭಿನ್ನಭಿನ್ನವಾಗಿ ಕಾಣುತ್ತೇವೆ. ಕೆಲವರನ್ನು ಪ್ರೀತಿಸುತ್ತೇವೆ. ಹಲವರನ್ನು ದ್ವೇಷಿಸುತ್ತೇವೆ. ಅಪರಿಚಿತರ ಬಗ್ಗೆ ನಿರ್ಲಕ್ಷ್ಯವನ್ನು ಹೊಂದಿರುತ್ತೇವೆ. ಈ ಸೃಷ್ಟಿಯ ಸಮಗ್ರ ಜೀವಜಾಲದಲ್ಲಿ, ಸಮಸ್ತ ಮನುಜರಲ್ಲಿ ಅಂತರ್ಗತವಾಗಿರುವುದು ದೇವರ ಅಂಶವೆಂಬ ತಿಳಿವಳಿಕೆ ನಮ್ಮಲ್ಲಿ ಇಲ್ಲದಿರುವುದೇ ನಿಜವಾದ ನಮ್ಮ ಅಜ್ಞಾನ, ಈ ಅಜ್ಞಾನವೇ ನಮ್ಮೊಳಗಿರುವ ಪರಮಾತ್ಮನ ಅಂಶವಾದ ಜೀವಾತ್ಮನನ್ನು ಮುಸುಕಿದೆ. ಆ ಮುಸುಕನ್ನು ತೆಗೆಯಬೇಕಾದರೆ ಮೊತ್ತ ಮೊದಲು ನಾವು ನಮ್ಮ ಬಗೆಗಿನ ಅಜ್ಞಾನವನ್ನು ಹೋಗಲಾಡಿಸಬೇಕು

   

Related Articles

error: Content is protected !!