ಮನುಷ್ಯನಷ್ಟು ಸ್ವಾರ್ಥಪರ ಜೀವಿ ದೇವರ ಸೃಷ್ಟಿಯಲ್ಲೇ ಬೇರೊಂದಿಲ್ಲ ಎಂದರೆ ಮನುಷ್ಯರಾಗಿರುವ ನಮಗೆ ಅದು ಪಥ್ಯವಾಗದು. ಮನುಷ್ಯನನ್ನು ಹೊರತುಪಡಿಸಿದರೆ ಉಳಿದೆಲ್ಲ ಜೀವಿಗಳು ತಮ್ಮ ಹಸಿವನ್ನು ಹಿಂಗಿಸಿಕೊಳ್ಳುವಷ್ಟರ ಮಟ್ಟಿಗೆ ಮಾತ್ರವೇ ಪರಪೀಡನೆಗೆ ತೊಡಗುವವು. ಆದರೆ ಮನುಷ್ಯನ ವಿಷಯದಲಿ ಹಾಗಿಲ್ಲಪರಪೀಡನೆಯಿಂದಲೇಸಂತೋಷಪಡುವವರು ಅಸಂಖ್ಯ ಸದಾ ಅಧಿಕಾರ, ಅಂತಸ್ತು, ಐಶ್ವರ್ಯ, ಕೀರ್ತಿಯ ಬೆನ್ನುಹತ್ತುವವರಿಗೆ ಅದು ದೊರಕಿದಷ್ಟೂ ಸಾಲದು; ಮತ್ತೂ ಮತ್ತೂ ಬೇಕೆನ್ನುವ ಅತಿಯಾಸೆ. ಹಾಗಾಗಿ ಮನುಷ್ಯನಷ್ಟು ಸ್ವಾರ್ಥಪರ ಜೀವಿ ಬೇರೊಂದಿಲ್ಲ. ಮನುಕುಲದ ನಾಶಕ್ಕೆ ಮನುಷ್ಯನೇ ಕಾರಣನಾಗುವ ದಿನಗಳನ್ನು ದೂರವಿಲ್ಲ. ಹೀಗಾಗಲು ಕಾರಣವೇನು ಎಂದು ನಾವು ಚಿಂತಿಸುವುದು ಅಗತ್ಯ. ಪರಮಾತ್ಮನ ಅಂಶವಾಗಿ ನಮ್ಮಲ್ಲಿ ವಿರಾಜಮಾನನಾಗಿರುವ ಜೀವಾತ್ಮನ ಬಗ್ಗೆ ನಾವು ಅಜ್ಞಾನದಿಂದ ಇರುವುದೇ ನಮ್ಮೆಲ್ಲ ಸ್ವಾರ್ಥಪರತೆಗೆ ಕಾರಣ. ಮಾಯೆಯ ಪ್ರಭಾವಕ್ಕೆ ಸಿಲುಕಿಕೊಂಡು ನಿಜವಲ್ಲದ್ದನ್ನೇ ನಿಜವೆಂದೂ ನಾವು ದೂರವಾದಷ್ಟೂ ಐಹಿಕ ಪ್ರಪಂಚಕ್ಕೆ ತೀವ್ರವಾಗಿ ಅಂಟಿಕೊಳ್ಳುವೆವು. ಮಿಥ್ಯಾಪ್ರಪಂಚದ ಸ್ಮಶಾನ ವೈರಾಗ್ಯ ಅನುಭವಿಸಿದರೂ ನಮ್ಮ ಇಂದ್ರಿಯಗಳ ಮೇಲಿನ ಹಿಡಿತವನ್ನು ನಾವು ಶಾಶ್ವತವೆಂದೂ ಭ್ರಮಿಸಿ ನಿರಂತರ ದುಃಖಕ್ಕೆ, ನಿರಾಸೆಗೆ ಗುರಿಯಾಗುವೆವು. ಅದರಿಂದ ಸ್ವಲ್ಪಕಾಲ ಕಳೆದುಕೊಂಡಿರುವುದರಿಂದ ಮತ್ತೆ ಬಾಹ್ಯ ಜಗತ್ತಿನ ಆಕರ್ಷಣೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವೆವು. ಬದುಕಿನಲ್ಲಿ ಕಷ್ಟ ದುಃಖ ಎದುರಾದಾಗ ಮಾತ್ರವೇ ದೇವರನ್ನು ತತ್ಕಾಲಕ್ಕೆ ಸ್ಮರಿಸಿಕೊಳ್ಳುವ ನಾವು ಮದದಿಂದ ಬೀಗುವಾಗ ದೇವರನ್ನು ಪೂರ್ಣವಾಗಿ ಮರೆಯುವುವು. ನಮ್ಮೊಳಗೇ ಇರುವಂತಹ ಈ ದ್ವಂದ್ವದ ಸೂಕ್ಷ್ಮವನ್ನು ನಾವು ಅರಿಯದೆ ಆತ್ಮವಂಚನೆ ಮಾಡಿಕೊಳ್ಳುವೆವು. ಹಾಗಿರುವಾಗ ಬದುಕಿನಲ್ಲಿ ಶಾಶ್ವತವಾದ ಸುಖ, ಶಾಂತಿ, ಸಂತೋಷ ನಮಗೆ ಸಿಗಬೇಕೆಂದು ಬಯಸುವುದಾದರೂ ಹೇಗೆ ?