Home »  ದೇವರ ಅಂಶ
 

 ದೇವರ ಅಂಶ

by Kundapur Xpress
Spread the love

ಪಂಚೇಂದ್ರಿಯಗಳು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಪ್ರಕೃತಿಯೊಂದಿಗೆ ಸ್ಪಂದಿಸುತ್ತವೆ ಎನ್ನುವುದು ನಿಜವೇ ಆದರೂ ದೇಹಧಾರಿಗಳಾಗಿರುವ ನಾವು ನಮ್ಮ ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಮನೋಶಕ್ತಿಯನ್ನೂ ಹೊಂದಿದ್ದೇವೆ ಎಂಬುದನ್ನು ಮರೆಯಬಾರದು. ನಮ್ಮ ದೇಹವು ನಿಜವಾದ ಅರ್ಥದಲ್ಲಿ ಜೀವಾತ್ಮನೆಂಬ ಪರಮಾತ್ಮನ ದೇಗುಲವೇ ಆಗಿದೆ. ಹಾಗೆ ನೋಡಿದರೆ ನಮ್ಮ ದೇಹವು ಸಂಚಾರಿ ದೇಗುಲವೆಂದೇ ಹೇಳಬೇಕು. ಇಂದಿನ ಕಾಲದಲ್ಲಿ ಎಲ್ಲವೂ ಮೊಬೈಲ್ ಸೇವಾರೂಪದಲ್ಲಿ ಸಿಗುವುದರಿಂದ ಅದರ ಮಹತ್ವವನ್ನು ಎಲ್ಲರೂ ತಿಳಿದವರಾಗಿದ್ದಾರೆ. ದೇಹವೆಂಬ ನಮ್ಮಿ ಈ ದೇಗುಲದಲ್ಲಿ ಜೀವಾತ್ಮನು ಇರುವಷ್ಟು ಕಾಲ ಅದು ಚೈತನ್ಯದಿಂದ ಕೂಡಿರುವುದು. ಆದುದರಿಂದ ನಮ್ಮ ದೇಹವೂ ಒಂದು ಸಂಚಾರಿ ದೇವಾಲಯವೇ ಆಗಿದೆ. ಚೈತನ್ಯವು ಈ ದೇಹದೊಳಗೆ ಪ್ರವಹಿಸುತ್ತಿರುತ್ತದೆ. ಆ ಅದ್ಭುತವಾದ ಚೈತನ್ಯದಿಂದಲೇ ನಾವು ಕರ್ಮಗಳಲ್ಲಿ ತೊಡಗಿರುವೆವು. ಯಾವ ಕ್ಷಣ ಈ ದೇಹದಿಂದ ದೇವರ ಆ ದಿವ್ಯ ಚೇತನವು ನಿರ್ಗಮಿಸುವುದೋ ಆ ಕ್ಷಣದಲ್ಲೇ ಅದು ಮರಣಿಸುವುದು. ತನ್ನ ದಿವ್ಯ ಪ್ರಭೆಯನ್ನೂ ಚೈತನ್ಯವನ್ನೂ ಕಳೆದುಕೊಂಡು ಮತ್ತೆ ಪಂಚಭೂತಕ್ಕೆ ಸೇರುವುದು. ನಮ್ಮ ದೇಹದಲ್ಲಿ ಪರಮಾತ್ಮನ ಅಂಶವಾಗಿರುವ ಜೀವಾತ್ಮನು ನೆಲೆಸಿರುವಷ್ಟು ಕಾಲ ಮಾತ್ರವೇ ಈ ದೇಹಕ್ಕೆ ಗೌರವ, ಆದರ, ಪ್ರೀತಿ ಸಿಗುವುದು. ಆ ಬಳಿಕ ಅದನ್ನು ಕೇವಲ ಕಳೇಬರ ಎಂದಷ್ಟೇ ಕರೆಯುವರು. ಆದುದರಿಂದ ನಮ್ಮ ದೇಹದೊಳಗೆ ನೆಲೆಸಿರುವ ಜೀವಾತ್ಮನಿಗೆ ಇರುವ ಮಹತ್ವವೆಷ್ಟು ಎಂಬ ಸತ್ಯವನ್ನು ನಾವು ಅರಿಯಬೇಕು. ಗುಡಿಯೊಳಗಿರುವ ದೇವರಿಗೆ ನಾವು ಹೇಗೆ ಕೈಮುಗಿದು ನಮ್ಮ ಭಯಭಕ್ತಿಯನ್ನು ತೋರುವೆವೋ ಹಾಗೆಯೇ ನಮ್ಮ ದೇಹವೆಂಬ ದೇಗುಲದೊಳಗೆ ಪರಮಾತ್ಮನ ಅಂಶವಾಗಿರುವ ಜೀವಾತ್ಮನನ್ನು ನಾವು ಕೈಮುಗಿದು ಗೌರವಿಸಬೇಕು. ಹಾಗೆ ಮಾಡುವ ಮೂಲಕ ಎಲ್ಲರಲ್ಲೂ ನಮಗೆ ದೇವರ ಅಂಶವನ್ನೇ ಕಾಣಲು ಸಾಧ್ಯವಾಗುವುದು

 

   

Related Articles

error: Content is protected !!