ಜಗತ್ತಿನ ಮೋಹಜಾಲದಲ್ಲಿ ಸಿಲುಕುವುದೆಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ನಮ್ಮೊಳಗಿನ ವೈರಿಗಳ ಕೈಗೆ ಸಿಲುಕಿ ಅವುಗಳ ಗುಲಾಮರಾಗಿ ಅವುಗಳು ಹೇಳಿದಂತೆ ಕೇಳುತ್ತಾ ಅತ್ಯಂತ ಘೋರವಾಗಿ ಬದುಕುವುದೆಂದೇ ಅರ್ಥ, ಅಹಂಭಾವದಿಂದ ಕೂಡಿದ ಅಂತಹ ಬದುಕಿನಲ್ಲಿ ದೇವರನ್ನು ನೆನೆಯುವುದೇ ದುಸ್ತರ. ಏಕೆಂದರೆ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಅಜ್ಞಾನವು ಆತ್ಮನನ್ನು ಮುಸುಕಿರುವುದು. ‘ಎಲ್ಲವೂ ನನ್ನಿಂದಲೇ ಸಾಧ್ಯವಾಯಿತು’ ಎಂಬ ಅಹಂಭಾವದಲ್ಲಿ ಇತರರೆಲ್ಲರನ್ನೂ ತುಚ್ಛವಾಗಿ ಕಾಣುವ ಮನೋಭಾವವೇ ಹೃದಯದೇಗುಲದಲ್ಲಿ ಮೆರೆಯುತ್ತಿರುವುದು. ಬದುಕಿನಲ್ಲಿ ಸಣ್ಣ ಸಣ್ಣ ಆಘಾತಗಳು ಎದುರಾದಾಗಲೂ ಅದನ್ನು ಸಹಿಸಿಕೊಳ್ಳುವ ತಾಳ್ಮೆ ಇಲ್ಲವಾಗುವುದು. ಐಹಿಕ ಬದುಕಿನ ಸುಖ-ಸಂತೋಷಗಳು ಕ್ಷಣ ಭಂಗುರವಾದುವುಗಳೆಂಬ ಅರಿವು ಉಂಟಾದಾಗಲೇ ಮಿಥ್ಯಾ ಜಗತ್ತಿನ ಇತಿಮಿತಿಗಳ ಪರಿಚಯವಾಗುವುದು. ಅಲ್ಲಿಯವರೆಗೂ ಪ್ರಾಪಂಚಿಕ ಮೋಹವು ನಮ್ಮನ್ನು ಸರ್ವಥಾ ಬಿಟ್ಟು ಹೋಗದು. ಈ ಅಜ್ಞಾನಗಳೆಲ್ಲ ನಾಶವಾಗಬೇಕಾದರೆ ಜೀವಾತ್ಮನಾಗಿ ನಮ್ಮ ನೆಲೆಸಿರುವ ಪರಮಾತ್ಮನನ್ನು ಕಾಣುವ ಪ್ರಯತ್ನವನ್ನು ನಾವು ಮಾಡಬೇಕು. ಹಾಗೆ ಮಾಡುವ ಮೂಲಕ ಪ್ರಾಪಂಚಿಕ ಬಂಧನದಿಂದ ಸ್ವಲ್ಪಸ್ವಲ್ಪವೇ ಹೊರಬರಲು ಸಾಧ್ಯವಾಗುವುದು. ಐಹಿಕ ಬಂಧನದಿಂದ ಪಾರಾಗುವ ಆತ್ಮಜ್ಞಾನದಿಂದ ನಾವು ಅಂತಿಮವಾಗಿ ಹುಟ್ಟು-ಸಾವಿನ ಆವೃತ್ತಿಯಿಂದ ಮುಕ್ತರಾಗಿ ಪರಮಗತಿಯನ್ನು ಹೊಂದಲು ಸಾಧ್ಯ ಎಂಬ ಭರವಸೆಯನ್ನು ಗೀತೆಯಲ್ಲಿ ಶ್ರೀಕೃಷ್ಣನು ನಮಗೆ ನೀಡುತ್ತಾನೆ. ಆ ಪರಮಗತಿಯನ್ನು ಪಡೆಯಲು ನಮ್ಮ ಮನಸ್ಸು ಸದಾ ಸಚ್ಚಿದಾನಂದ ಘನ ಪರಮಾತ್ಮನಲ್ಲಿಯೇ ತಲ್ಲೀನವಾಗಿರಬೇಕು. ಮನಸ್ಸು ಆತನಲ್ಲಿಯೇ ನಿಶ್ಚಲವಾಗಿರಬೇಕು. ನಿಷ್ಠೆಯು ಒಂದೇ ಭಾವದಿಂದ ಸ್ಥಿರವಾಗಿರಬೇಕು. ಆತ್ಮನಲ್ಲಿ ಈ ರೀತಿಯ ತತ್ಪರತೆಯನ್ನು ಹೊಂದುವ ಮೂಲಕ ಐಹಿಕ ಆಕರ್ಷಣೆಗಳಿಂದ ಪಾರಾಗಿ ಸಮತ್ವವನ್ನು ಪಡೆಯುವುದು ಸಾಧ್ಯ