ಸಮಾಜದಲ್ಲಿ ನಮಗೆ ದೊರಕುವ ಸ್ಥಾನಮಾನ, ಗೌರವ, ಆದರ ಇತ್ಯಾದಿಗಳೆಲ್ಲವೂ ನಮ್ಮ ಮನಸ್ಸಿಗೆ ಸುಖ-ಸಂತೋಷವನ್ನು ಕೊಡುತ್ತವೆ ನಿಜ. ಆದರೆ ಅದು ದೊರಕಿರುವುದು ಯಾರಿಗೆ ಎನ್ನುವುದನ್ನು ನಾವು ವಿವೇಚಿಸಬೇಕು. ಇಲ್ಲಿ ‘ಯಾರಿಗೆ’ ಎನ್ನುವ ಪ್ರಶ್ನೆ ಅನೇಕರಲ್ಲಿ ಗೊಂದಲ ಉಂಟುಮಾಡಬಹುದು. ಆದರೂ ಅದು ಬಹುಮುಖ್ಯವಾದ ಪ್ರಶ್ನೆ, ಸಾಮಾನ್ಯವಾಗಿ ನಮ್ಮನ್ನು ಜನರು ಗೌರವಿಸಿದಾಗ, ಆದರಿಸಿದಾಗ, ಸ್ಥಾನಮಾನ ಕೊಟ್ಟಾಗ ಅದರಿಂದ ನಮಗೆ ದೊರಕುವುದಕ್ಕಿಂತಲೂ ಮಿಗಿಲಾಗಿ ಅದು ನಮ್ಮಲ್ಲಿ ಅಹಂಭಾವವನ್ನೇ ಉಂಟುಮಾಡುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಅಸ್ತಿತ್ವವನ್ನು ದೇಹಕ್ಕೆ ಸೀಮಿತಗೊಳಿಸಿ ದೇಹಾಭಿಮಾನವನ್ನು ತಾಳುವುದೇ ಆಗಿದೆ. ಯಶಸ್ಸು ಹಾಗೂ ಜನಪ್ರಿಯತೆ ತುದಿಗೇರುವ ವ್ಯಕ್ತಿಯಲ್ಲಿ ಅಹಂಭಾವವೇ ತೀವ್ರಗೊಂಡು ಆತ ದೇಹಾಭಿಮಾನದಿಂದ ಬೀಗುವಂತಾಗುವುದು ನಿಜಕ್ಕೂ ಆತನ ಬದುಕಿನ ದುರಂತ. ನಾವು ಹಾದಿ ತಪ್ಪುವುದು ಇಲ್ಲೇ. ಬದುಕಿನಲ್ಲಿ ನಮಗೆ ದೊರಕುವ ಗೌರವಾದರ, ಸ್ಥಾನಮಾನ ಎಲ್ಲವೂ ನಮ್ಮೊಳಗಿನ ದೇವರಿಗೆ ಸಂದ ಗೌರವಾದರವೇ ವಿನಾ ನಮ್ಮ ದೈಹಿಕ ಅಸ್ತಿತ್ವಕ್ಕೆ ಅಲ್ಲ ಎನ್ನುವ ಅರಿವು ನಮ್ಮೊಳಗೆ ಇರಬೇಕು. ಆಗ ಮಾತ್ರವೇ ನಾವು ದೇಹಾಭಿಮಾನದಿಂದ ಹೊರಬರಲು ಸಾಧ್ಯ. ಬದುಕಿನಲ್ಲಿ ಪ್ರಿಯವಾದುದು ಅಥವಾ ಅಪ್ರಿಯವಾದುದು ಪ್ರಾಪ್ತವಾದಾಗ ಮನಸ್ಸಿನ ಸಮತ್ವವನ್ನು ಉಳಿಸಿಕೊಳ್ಳಲು ಆತ್ಮಜ್ಞಾನವೇ ದಾರಿದೀಪವಾಗುವುದು. ದೇಹವು ದೇಗುಲವಾದರೆ ಆತ್ಮವು ಆ ದೇಗುಲದಲ್ಲಿ ವಿರಾಜಿಸುವ ದೇವರೆಂದು ತಿಳಿಯಬೇಕು. ಆತ್ಮನನ್ನು ಅರಿಯಲು ದೇಹವೆಂಬ ದೇವಾಲಯದ ಬಾಗಿಲನ್ನು ಮೊತ್ತಮೊದಲಾಗಿ ತೆರೆಯುವ ಪ್ರಯತ್ನವಾಗಬೇಕು. ದೇಹದ ಇತಿಮಿತಿಗಳನ್ನು ತಿಳಿಯುವ ಮೂಲಕ ಅದರ ಪ್ರಭುತ್ವವನ್ನು ಸಾಧಿಸಲು ಪ್ರಯತ್ನಿಸಿ ಆ ಮೂಲಕ ದೇಹಾಭಿಮಾನದಿಂದ ಹೊರಬರಬೇಕು. ಆಗ ಮಾತ್ರವೇ ದೇಹಕ್ಕೆ ದೊರಕುವ ಗೌರವ, ಆದರ, ಮನ್ನಣೆ ಇತ್ಯಾದಿಗಳೆಲ್ಲವೂ ಜೀವಾತ್ಮನಾಗಿ ನಮ್ಮಲ್ಲಿ ನೆಲೆಸಿರುವ ಪರಮಾತ್ಮನಿಗೆ ಸಂದಿರುವುದೆಂಬ ತಿಳಿವಳಿಕೆ ಮೂಡಲು ಸಾಧ್ಯ.