Home » ಆಧ್ಯಾತ್ಮಿಕ ದೃಷ್ಟಿ
 

ಆಧ್ಯಾತ್ಮಿಕ ದೃಷ್ಟಿ

by Kundapur Xpress
Spread the love

ನಮ್ಮ ಮನಸ್ಸು ಹೇಗೋ ಹಾಗೆಯೇ ನಾವು. ಮನಸ್ಸು ಉಲ್ಲಾಸದಿಂದ ಇದ್ದರೆ ನಮ್ಮ ದೇಹವೂ ಅಷ್ಟೇ ಉಲ್ಲಾಸದಿಂದ ಇರುತ್ತದೆ. ಮನಸ್ಸು ಮುದುಡಿಕೊಂಡಿದ್ದರೆ ದೇಹವೂ ಅನುಸರಿಸುತ್ತದೆ. ಆದರೆ ನಮ್ಮ ಒಟ್ಟು ಸ್ಥಿತಿಗೆ ದೇಹವೇ ಮೂಲ ಕಾರಣವೆಂದು ತಿಳಿಯುವುದು ಸರಿಯಲ್ಲ. ದೇಹವು ಸುಂದರವಾಗಿ ಕಾಣಿಸಿಕೊಳ್ಳಬೇಕು ಮತ್ತು ಆ ಮೂಲಕ ನಮ್ಮ ವ್ಯಕ್ತಿತ್ವವು ವಿಜೃಂಭಿಸಬೇಕು ಎಂದು ನಾವು ಬಯಸುತ್ತೇವೆ. ಅದಕ್ಕಾಗಿ ಸೌಂದರ್ಯವರ್ಧನೆಗೆ ಹೆಚ್ಚು ಕಾಳಜಿಯನ್ನು ವಹಿಸುತ್ತೇವೆ. ಆದರೆ ನಮ್ಮ ಮನಸ್ಸಿನ ಸೂಕ್ಷ್ಮಗಳನ್ನು ನಾವು ಕಡೆಗಣಿಸುತ್ತೇವೆ. ನಮ್ಮ ಮನಸ್ಸನ್ನು ನಾವು ಪ್ರಫುಲ್ಲವಾಗಿಟ್ಟುಕೊಂಡರೆ ಮಾತ್ರವೇ ದೇಹ ಕೂಡ ಹಾಗೆಯೇ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ತಗಲುವ ರೋಗರುಜಿನಗಳ ಮೂಲ ಇರುವುದೇ ಮನಸ್ಸಿನಲ್ಲಿ ಎನ್ನುತ್ತಾರೆ ವಿಜ್ಞಾನಿಗಳು, ನಿಜಕ್ಕಾದರೆ ನಮ್ಮ ಬದುಕನ್ನು ಸುಂದರಗೊಳಿಸಲು ನಾವು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪ್ರಯತ್ನಿಸಬೇಕು. ದೇವರು ಪ್ರಕೃತಿಗೆ ಅನ್ವಯಿಸಿರುವ ನಿಯಮ ಕೂಡ ಇದೇ ಆಗಿದೆ. ‘ನನಗಿಂದು ಯಾಕೋ ಮೈ ಹುಶಾರಿಲ್ಲ’ ಎಂದು ನಾವು ಮನದಲ್ಲಿ ಸ್ವಲ್ಪವೇ ಸಂದೇಹ ಪಟ್ಟುಕೊಂಡರೆ ದೇಹಕ್ಕೆ ಅಷ್ಟೇ ಸಾಕಾಗುತ್ತದೆ. ಒಡನೆಯೇ ಅದು ರೋಗ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುತ್ತದೆ. ಆದುದರಿಂದ ದೇಹದಲ್ಲಿ ಸದಾ ಉತ್ತಮ ಆರೋಗ್ಯ ಮತ್ತು ಚೈತನ್ಯವನ್ನು ಉಳಿಸಿಕೊಳ್ಳಲು ನಾವು ನಿತ್ಯವೂ ಸಕಾರಾತ್ಮಕವಾಗಿ ಯೋಚಿಸಬೇಕು. ನಮಗೂ ಇತರರಿಗೂ ಯಾವತ್ತೂ ಒಳ್ಳೆಯದೇ ಆಗಲೆಂದು ಹಾರೈಸಬೇಕು. ಆಗ ನಮ್ಮಲ್ಲಿನ ಲೋಭ, ಮೋಹ ಹಾಗೂ ಸ್ವಾರ್ಥವನ್ನು ಗೆಲ್ಲಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸನ್ನು ವಿಷಮಯಗೊಳಿಸಿ ದೇಹವನ್ನು ಅಸ್ವಾಸ್ಥ್ಯಕ್ಕೆ ಗುರಿಪಡಿಸುವ ಈ ಮೂರು ಪರಮ ವೈರಿಗಳನ್ನು ಗೆಲ್ಲಲು ನಾವು ನಮ್ಮಲ್ಲಿ ಮತ್ತು ಎಲ್ಲರಲ್ಲೂ ದೇವರನ್ನು ಕಾಣುವ ಆಧ್ಯಾತ್ಮಿಕ ದೃಷ್ಟಿಯನ್ನು ಪಡೆಯಬೇಕು. ದಿನನಿತ್ಯ ಧ್ಯಾನವನ್ನು ಕೈಗೊಳ್ಳುವ ಮೂಲಕ ಮನಸ್ಸನ್ನು ಪ್ರಫುಲ್ಲವಾಗಿಡಬಹುದು. ಭಜನೆಯ ಮೂಲಕವೂ ಇದು ಸಾಧ್ಯ. ಏಕೆಂದರೆ ಧ್ಯಾನದಲ್ಲಿ, ಭಜನೆಯಲ್ಲಿ ನಿರತರಾಗಿರುವಷ್ಟು ಹೊತ್ತು ನಾವು ನಮ್ಮಲ್ಲಿನ ಅಹಂಭಾವವನ್ನು ಮರೆಯುವೆವು !

   

Related Articles

error: Content is protected !!