Home » ಏಕತೆಯ ಭಾವ
 

ಏಕತೆಯ ಭಾವ

by Kundapur Xpress
Spread the love

ದೇವರು ಸರ್ವಾಂತರ್ಯಾಮಿ, ಆತ ಎಲ್ಲೆಡೆಯೂ ಇದ್ದಾನೆ. ನಮ್ಮೆಲ್ಲರ ಸೃಷ್ಟಿ ಕರ್ತನಾಗಿರುವ ಆತನಿಗೆ ನಮ್ಮ ಸಮಸ್ತ ವಿಚಾರಗಳೂ ತಿಳಿದಿವೆ. ನಮ್ಮ ಬೇಕು-ಬೇಡ ಗಳೆಲ್ಲವೂ ಆತನಿಗೆ ಗೊತ್ತಿದೆ. ಹಾಗಿರುವಾಗ ಆತನೆದುರು ನಮ್ಮ ಐಹಿಕ ಬದುಕಿನ ಬೇಡಿಕೆಗಳನ್ನು ಮಂಡಿಸುವುದು ಎಷ್ಟು ಸರಿ? ಹಾಗೆ ನಮ್ಮ ಬೇಡಿಕೆಗಳನ್ನು ನಿವೇದಿಸಿ ಕೊಳ್ಳುವ ಅಗತ್ಯವಾದರೂ ಇದೆಯೇ? ಅನೇಕರಿಗೆ ಈ ಮಾತು ಪಥ್ಯವಾಗಲಾರದು. ದೇವರಲ್ಲಿ ಅಲ್ಲದೆ ನಮ್ಮ ಬೇಡಿಕೆಗಳನ್ನು ಬೇರೆ ಯಾರಲ್ಲಿ ಮಂಡಿಸುವುದು ಎಂಬ ಮರು ಪ್ರಶ್ನೆಯನ್ನು ಥಟ್ಟನೆ ಅವರು ಕೇಳಬಹುದು. ದೇವರಿಗೆ ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಪಿಸಿಕೊಂಡ ಬಳಿಕ ನಮ್ಮದೆನ್ನುವ ಅಸ್ತಿತ್ವವನ್ನು ನಾವು ಕಾಣುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಆತನಿಂದ ಪ್ರತ್ಯೇಕವಾಗಿ ನಮ್ಮನ್ನು ಕಂಡು ಕೊಂಡಾಗಲೇ ನಮ್ಮಲ್ಲಿ ವ್ಯಾಮೋಹದ ಭಾವವು ತೀವ್ರಗೊಳ್ಳುವುದು. ಜೀವಾತ್ಮನ ರೂಪದಲ್ಲಿ ನಮ್ಮಲ್ಲಿರುವ ದೇವರ ಅಂಶವು ಪುನಃ ದೇವರನ್ನೇ ಸೇರಬೇಕಾಗಿದೆ. ಐಹಿಕ ಬದುಕೇ ನಮಗೆ ಸರ್ವಸ್ವವಲ್ಲ. ಆದುದರಿಂದಲೇ ನಾವು ಪುನಃ ಅವುಗಳನ್ನು ಆತನಲ್ಲಿ ಬೇಡಬೇಕೆಂದಿಲ್ಲ. ಬೇಡುವುದಿದ್ದರೆ ಆತನ ದಿವ್ಯ ಸನ್ನಿಧಾನವನ್ನೇ ಬೇಡ ಬೇಕು. ಅನಿತ್ಯವಾದ ಯಾವ ವಸ್ತುಗಳನ್ನೂ ನಾವು ಆತನಿಂದ ಬೇಡಬಾರದು. ಶ್ರೀಕೃಷ್ಣನ ಗೆಳೆಯ, ಸಹಪಾಠಿ, ಭಕ್ತ ಸುಧಾಮನ ಅಭಿಪ್ರಾಯವೂ ಇದೇ ಆಗಿತ್ತು. ತಾನು ದಟ್ಟ ದಾರಿದ, ದಲ್ಲಿದ್ದ ಸಂದರ್ಭದಲ್ಲೂ ಆತ ಶ್ರೀಕೃಷ್ಣನಲ್ಲಿ ಏನನ್ನೂ ಬೇಡಲಿಲ್ಲ. ಹಾಗೆ ಬೇಡಬೇಕೆಂಬ ವಿಚಾರವೇ ಆತನ ಮನಸ್ಸಿಗೆ ಬರಲಿಲ್ಲ. ಕೊನೆಗೂ ಕುಚೇಲನಾಗಿ ಆತನು ಶ್ರೀಕೃಷ್ಣನ ಬಳಿಗೆ ಹೋದದ್ದು ತನ್ನ ಹೆಂಡತಿಯ ಒತ್ತಾಯಕ್ಕೆ ! ಸುಧಾಮನಲ್ಲಿ ಶ್ರೀಕೃಷ್ಣನ ಬಗ್ಗೆ ಅಚಲವಾದ ನಂಬಿಕೆ, ವಿಶ್ವಾಸವಿತ್ತು, ಅಪಾರವಾದ ಭಕ್ತಿ ಇತ್ತು. ಹಾಗೆಂದು ಆ ನಂಬಿಕೆ, ವಿಶ್ವಾಸ ಹಾಗೂ ಭಕ್ತಿಯನ್ನು ತನ್ನ ದಾರಿದ್ರ ನಿವಾರಣೆಯ ಸಲುವಾಗಿ ಬಳಸಲು ಆತನಿಗೆ ಮನಸ್ಸಿರಲಿಲ್ಲ. ಎಲ್ಲವನ್ನೂ ಬಲ್ಲ ಆ ಮಹಾಮಹಿಮನಿಗೆ ನಾವು ಪ್ರತ್ಯೇಕವಾಗಿ ಏನನ್ನಾದರೂ ಹೇಳುವ ಅಗತ್ಯವೇ ಇಲ್ಲ ಎಂಬ ಭಾವನೆ ಸುಧಾಮನದ್ದಾಗಿತ್ತು! ಹಾಗಾಗಿ ತನಗೊದಗಿದ ದಾರಿದ್ರವನ್ನು ಆತ ದೇವರ ಪ್ರೀತ್ಯರ್ಥವೆಂಬಂತೆ ಅನುಭವಿಸುತ್ತಿದ್ದ.

   

Related Articles

error: Content is protected !!