Home » ಮನಸ್ಸೆಂಬ ಸಾಗರ
 

ಮನಸ್ಸೆಂಬ ಸಾಗರ

by Kundapur Xpress
Spread the love

ನೀತಿ ಮಂಜರಿ ಹೇಳುತ್ತದೆ: ‘ಕಷ್ಟಗಳು ಬಂದಾಗ ವಿವೇಕಿಗಳು ಅಧೀರರಾಗುವುದಿಲ್ಲ. ಮಂದ ಬುದ್ದಿಯವರು ಗೋಳಾಡಿ ಸಿಡಿಮಿಡಿಗೊಳ್ಳುತ್ತಾರೆ. ಗಿಡಗಳನ್ನು ಬಗ್ಗಿಸುವ ಸುಂಟರಗಾಳಿ ಕಲ್ಲಿನ ಕಂಬದಲ್ಲಿ ನಡುಕ ಉಂಟುಮಾಡೀತೆ?’ ಪ್ರಾಪಂಚಿಕ ಬದುಕಿನಲ್ಲಿ ಮನುಷ್ಯರಿಗೆ ಕಷ್ಟನಷ್ಟಗಳು, ಎಡರುತೊಡರುಗಳು ಎದುರಾಗುವುದು ಸಹಜವೇ. ಏಕೆಂದರೆ ನಾವೆಲ್ಲರೂ ದೋಷಯುಕ್ತರು! ಬಾಹ್ಯ ಹಾಗೂ ಆಂತರಿಕ ಪ್ರಕೃತಿಯು ಅಸಮತೆಗಳಿಂದ ತುಂಬಿಕೊಂಡಿದೆ. ಹಾಗಿರುವಾಗ ನಮ್ಮ ಪ್ರಾಪಂಚಿಕ ಬದುಕು ಕಷ್ಟನಷ್ಟಗಳಿಲ್ಲದೆ ಏಕಪ್ರಕಾರವಾಗಿ ನಡೆಯಬೇಕು ಎಂದು ಭಾವಿಸಲಾಗದು. ಬದುಕಿನಲ್ಲಿ ಕಷ್ಟನಷ್ಟಗಳು ಎದುರಾಗುವುದೇ ನಮಗೆ ನಮ್ಮ ಮೇಲಿರುವ ವಿಶ್ವಾಸ, ದೇವರಲ್ಲಿ ನಮಗಿರುವ ನಂಬಿಕೆಯನ್ನು ಪರೀಕ್ಷಿಸುವ ಸಲುವಾಗಿ ಎಂಬ ತಿಳಿವಳಿಕೆಯನ್ನು ನಾವು ಹೊಂದಿರುವುದು ಒಳ್ಳೆಯದು. ಸ್ವಾಮಿ ಶಿವಾನಂದರು ಹೇಳುತ್ತಾರೆ: ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಅಪ್ರಿಯ ಘಟನೆಯೂ ದೇವರ ಬಗೆಗಿನ ನಮ್ಮ ವಿಶ್ವಾಸದ ಪರೀಕ್ಷೆಯೇ ಆಗಿದೆ. ಪ್ರಾಪಂಚಿಕ ಬದುಕಿನ ಸುಖ-ಸಾಧನಗಳನ್ನು, ಸಿರಿ ಸಂಪತ್ತನ್ನು ದೇವರಲ್ಲಿ ಬೇಡಿಕೊಂಡಷ್ಟೂ ನಾವು ಹುಟ್ಟು ಸಾವಿನ ಚಕ್ರಕ್ಕೆ ಬಂಧಿಸಲ್ಪಡುತ್ತೇವೆ. ಅನಿತ್ಯವಾದ ವಸ್ತುಗಳನ್ನು ಬಯಸಿದಷ್ಟೂ ಅವುಗಳ ಮೇಲಿನ ಮೋಹ ತೀವ್ರ ಗೊಳ್ಳುತ್ತದೆ; ಮತ್ತಷ್ಟು ಬೇಕೆಂಬ ಆಸೆಬುರುಕತನವನ್ನು ನಮ್ಮಲ್ಲಿ ಅದು ಉಂಟು ಮಾಡುತ್ತದೆ. ಜಪಾನೀ ಗಾದೆಯೊಂದು ಹೇಳುವಂತೆ ಯಾವುದೇ ಒಂದು ವಸ್ತುವನ್ನು ಪಡೆಯುವುದಕ್ಕೆ ಮುಂಚೆ ಇದ್ದ ಮೋಹವು ಅದನ್ನು ಪಡೆದಾದ ಮೇಲೆ ಇರುವುದಿಲ್ಲ! ಆದುದರಿಂದಲೇ ಪ್ರಾಪಂಚಿಕ ಬದುಕಿನ ಆಸೆಗಳೆಲ್ಲವೂ ಸಮುದ್ರದ ಅಲೆಗಳಂತೆ ಒಂದರ ಬಳಿಕ ಒಂದರAತೆ ನಮ್ಮಲ್ಲಿ ಹುಟ್ಟಿಬರುತ್ತಲೇ ಇರುತ್ತವೆ; ಮಾತ್ರವಲ್ಲ ಅವುಗಳನ್ನು ಈಡೇರಿಸಿದಷ್ಟೂ ಅವು ಮತ್ತಷ್ಟು ಪ್ರಾಬಲ್ಯದೊಂದಿಗೆ ಮೇಲೆದ್ದು ಬರುತ್ತವೆ. ಪರಿಣಾಮದಲ್ಲಿ ನಮ್ಮನ್ನು ನಿರಂತರ ಕಷ್ಟ-ದುಃಖಗಳಿಗೆ ಅವು ಗುರಿಪಡಿಸುತ್ತವೆ. ದೇವರಲ್ಲಿ ವಿಶ್ವಾಸವಿರಿಸಿ ಆತನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ ಮನಸ್ಸೆಂಬ ಸಾಗರವು ಶಾಂತವಾಗಿರಬಲ್ಲುದು. ಆ ಶಾಂತ ಸಾಗರದಲ್ಲಿ ಆಸೆಗಳೆಂಬ ಹುಚ್ಚು ಅಲೆಗಳ ರೌದ್ರ ನರ್ತನಕ್ಕೆ ಅವಕಾಶವಿರದು!

   

Related Articles

error: Content is protected !!