ನಮ್ಮ ಬದುಕಿನಲ್ಲಿ ನಾವು ಯಾವತ್ತೂ ಸಾಗಲು ಬಯಸುವುದು ಇನ್ನೂ ಉತ್ತಮ ಸ್ಥಿತಿಯತ್ತ ಯಾರೂ ಸದಾ ದುಃಖದಲ್ಲಿರಲು ಬಯಸುವುದಿಲ್ಲ. ಎಲ್ಲರ ಉದ್ದೇಶವೂ ಬದುಕಿನ ಕಷ್ಟ ಕೋಟಲೆಗಳಿಂದ ಪಾರಾಗುವುದೇ ಆಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ನಾವು ನಿಜವಾದ ಅರ್ಥದಲ್ಲಿ ಮೋಕ್ಷದೆಡೆಗೆ ಸಾಗುವ ಹಂಬಲವನ್ನೇ ಹೊಂದಿರುತ್ತೇವೆ. ಮೋಕ್ಷದೆಡೆಗೆ ಸಾಗುವುದೆಂದರೆ ಎಲ್ಲ ಐಹಿಕ ಬಂಧನಗಳಿಂದ ಪಾರಾಗುವುದು ಮಾತ್ರವಲ್ಲ ಜನನ-ಮರಣಗಳ ಚಕ್ರದಿಂದಲೂ ಮುಕ್ತಿ ಪಡೆಯುವುದೇ ಆಗಿದೆ. ಅಂತಿಮವಾಗಿ ಸಚ್ಚಿದಾನಂದ ಸ್ವರೂಪಿಯಾದ ದೇವರನ್ನು ಸೇರುವುದೇ ನಮ್ಮೆಲ್ಲರ ಗುರಿ. ದೈನಂದಿನ ಬದುಕಿನಲ್ಲಿ ನಾವು ಸುಖ, ಸಂತೋಷ, ನೆಮ್ಮದಿಯಿಂದ ಇರಲು ಬಯಸುವುದು ಕೂಡ ಮೋಕ್ಷದ ಅಪೇಕ್ಷೆಯಿಂದಲೇ. ಆದರೆ ಐಹಿಕ ಪ್ರಪಂಚಕ್ಕೆ ನಾವು ನಮ್ಮನ್ನು ಬಿಗಿಯಾಗಿ ಬಂಧಿಸಿಕೊಂಡಿರುವುದರಿಂದ ಮೋಕ್ಷವನ್ನು ಅಪೇಕ್ಷಿಸುವ ನಮ್ಮ ಮೂಲ ಆಧ್ಯಾತ್ಮಿಕ ಸ್ವಭಾವದ ವಿಸ್ಮರಣೆಗೆ ನಾವು ಗುರಿಯಾಗಿರುವೆವು. ಆದುದರಿಂದಲೇ ನಾವು ಆತ್ಮಪ್ರಜ್ಞೆಯಿಂದ ವಿಮುಖರಾಗಿರುವೆವು. ಐಹಿಕ ಬದುಕಿಗೆ ನಾವು ಹೆಚ್ಚೆಚ್ಚು ಅಂಟಿಕೊಂಡ ಹಾಗೆ ನಮ್ಮ ದೇಹವೇ ನಮಗೆ ಪ್ರಧಾನವಾಗಿ ಕಾಣಿಸುತ್ತದೆ. ನಾವೆಂದರೆ ನಮ್ಮ ದೇಹವೇ ಎಂಬ ಭ್ರಮೆಗೆ ಗುರಿಯಾಗಿದ್ದೇವೆ. ಈ ಭ್ರಮೆಯಿಂದಾಗಿ ನಮ್ಮ ಕಲ್ಪನೆಯ ಸುಖ-ಸಂತೋಷ-ನೆಮ್ಮದಿಗಳೆಲ್ಲವೂ ನಮ್ಮ ದೇಹಕ್ಕೆ ಸಂಬಂಧಿಸಿದ್ದೆಂಬ ಭಾವನೆಯನ್ನು ನಾವು ತಳೆದಿದ್ದೇವೆ. ಹಾಗಾಗಿ ದೇಹ ಸುಖವೇ ನಮಗೆ ಮುಖ್ಯವಾಗಿದೆ. ಪ್ರಾಪಂಚಿಕ ಬಂಧನಗಳಿಂದ ಪಾರಾಗಿ ಪಾರಮಾರ್ಥಿಕ ಆನಂದವನ್ನು ಹೊಂದುವ ನಮ್ಮ ಮೂಲ ಸ್ವಭಾವವನ್ನು ಮರೆಯದೆ ಬಾಳಿನಲ್ಲಿ ಸಾಗಿದರೆ ಆತ್ಮೋನ್ನತಿಯ ಮಜಲುಗಳು ಕಾಣಸಿಗುತ್ತವೆ. ಆದುದರಿಂದ ದೇಹಪ್ರಜ್ಞೆಯನ್ನು ಮೀರಿ ಮುಂದೆ ಸಾಗುವ ಮುನ್ನೋಟವನ್ನು ಕಳೆದುಕೊಳ್ಳಬಾರದು. ಹೀಗಾಗದಿರಲು ದೇಹ ಮತ್ತು ಮನಸ್ಸನ್ನು ಮೀರಿದ ಒಂದು ಶಕ್ತಿ ನಮ್ಮೊಳಗೆ ಇದೆ ಎಂಬುದನ್ನು ನಾವು ಕಂಡುಕೊಳ್ಳಬೇಕಾಗುತ್ತದೆ. ಅಂತಹ ಪ್ರಯತ್ನಕ್ಕೆ ಮುಂದಾದಾಗ ನಮ್ಮ ಬದುಕಿನ ಎಲ್ಲ ಚಟುವಟಿಕೆಗಳ ಗುರಿ ಮೋಕ್ಷ ಸಾಧನೆಯೇ ಆಗಿದೆ ಎಂಬ ಸತ್ಯದ ಅರಿವು ನಮಗಾಗುತ್ತದೆ