ಗೌತಮ ಬುದ್ಧ ಒಮ್ಮೆ ನದಿ ದಡದಲ್ಲಿ ತನ್ನ ಶಿಷ್ಯರಿಗೆ ಬೋಧನೆಯನ್ನು ನೀಡಿದ ಬಳಿಕ ಸ್ವಲ್ಪ ಹೊತ್ತು ಧ್ಯಾನ ಮಗ್ನನಾಗಿ ಕುಳಿತಿದ್ದ. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಆಗಂತುಕನೊಬ್ಬ ಹಠಾತ್ ಸಿಟ್ಟನ್ನು ಪ್ರದರ್ಶಿಸಿ ಬುದ್ಧನ ಮುಖದ ಮೇಲೆ ಉಗುಳಿದ ! ಯಾರೂ ನಿರೀಕ್ಷಿಸಿರದ ಆ ಒಂದು ಕೆಟ್ಟ ಘಟನೆ ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು. ಕ್ರುದ್ದಗೊಂಡ ಬುದ್ಧನ ಶಿಷ್ಯರು ಆ ದುಷ್ಟ ಆಗಂತುಕನನ್ನು ದಂಡಿಸಲು ಬುದ್ಧನ ಅನುಮತಿಯನ್ನು ಕೇಳಿದರು. ಧ್ಯಾನದಿಂದ ಹೊರಬಂದ ಬುದ್ಧ ಏನೂ ಘಟಿಸಿಲ್ಲವೆಂಬಂತೆ ತನ್ನ ಎಂದಿನ ಶಾಂತ ಮುದ್ರೆಯಲ್ಲೇ ಇದ್ದ. ಮುಖದ ಮೇಲೆ ಬಿದ್ದಿದ್ದ ಉಗುಳನ್ನು ಕೈಯಿಂದ ಉಜ್ಜುತ್ತಾ ಶಿಷ್ಯರನ್ನು ಶಾಂತಿಯಿಂದಿರಲು ಸೂಚಿಸಿದ. ಬಳಿಕ ಆಗಂತುಕನ ಮಂದಹಾಸವನ್ನು ಬೀರಿ ಹೇಳಿದ: ‘ಕ್ರೋಧವನ್ನು ಗೆಲ್ಲಲು ನನಗೆ ಸಾಧ್ಯವಾಗಿದೆಯೋ ಇಲ್ಲವೋ ಎಂದು ತಿಳಿಯುವ ಅಪೂರ್ವ ಅವಕಾಶವನ್ನು ನೀನಿಂದು ಒದಗಿಸಿಕೊಟ್ಟೆ. ಅದಕ್ಕಾಗಿ ನಿನಗೆ ತುಂಬ ಧನ್ಯವಾದಗಳು. ಇನ್ನು ಮುಂದೆಯೂ ನೀನು ಹೀಗೆ ಬಂದು ನನ್ನ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ತನ್ನ ಮೇಲೆ ಸಿಟ್ಟಿನಿಂದ ಉಗಿದ ಆಗಂತುಕನ ಮೇಲೆ ಬುದ್ದನಿಗೆ ಒಂದಿನಿತೂ ಕೋಪ ಬರಲಿಲ್ಲ ಮಾತ್ರವಲ್ಲ ಆ ಅನಿರೀಕ್ಷಿತ ಘಟನೆಯಿಂದ ಬುದ್ಧ ಸ್ವಲ್ಪವೂ ವಿಚಲಿತನಾಗಲಿಲ್ಲ. ಇದನ್ನು ಕಂಡು ಆ ಆಗಂತುಕನಿಗೆ ಅತ್ಯಾಶ್ಚರ್ಯವಾಯಿತು. ನಿಜಕ್ಕಾದರೆ ಆತನಿಗೆ ಬುದ್ಧನ ಉಪದೇಶಗಳಲ್ಲಿ ನಂಬಿಕೆ ಇರಲಿಲ್ಲ. ಅವೆಲ್ಲವೂ ಕೆಲಸಕ್ಕೆ ಬಾರದವುಗಳೆಂಬ ಭಾವನೆಯೇ ಆತನಲ್ಲಿದ್ದಿತ್ತು. ಆದರೆ ಬುದ್ಧ ನಡೆದಂತೆ ನುಡಿವವನು, ನುಡಿದಂತೆ ನಡೆಯುವವನು ಎಂಬುದು ಆತನಿಗೆ ಈಗ ಋಜುವಾತಾ ಯಿತು. ಒಡನೆಯೇ ಆತ ಬುದ್ಧನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ. ಮಾತ್ರವಲ್ಲ ತಾನೂ ಬುದ್ಧನ ಶಿಷ್ಯನಾದ. ಬುದ್ಧ ಹೇಳಿದ: ‘ಕ್ರೋಧವನ್ನು ನಿಯಂತ್ರಿಸದ ಮಾತ್ರಕ್ಕೆ ಗೆಲ್ಲುವುದು ಕಷ್ಟ. ಅದನ್ನು ಆಮೂಲಾಗ್ರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಬಳಿಕವೇ ಅದನ್ನು ಗೆಲ್ಲುವ ಶಕ್ತಿಯನ್ನು ನಾವು ಪಡೆಯಬಲ್ಲೆವು!’ ನಮಗೆ ಸಿಟ್ಟು ಏಕೆ ಬರಬೇಕು? ಅದು ಎಲ್ಲಿಂದ ಬರುತ್ತದೆ. ನಮ್ಮ ದೌರ್ಬಲ್ಯದ ಮೂಲ ಎಲ್ಲಿದೆ ಎಂದು ತಿಳಿದುಕೊಂಡರೆ ಸಿಟ್ಟನ್ನು ಗೆಲ್ಲುವುದು ಕಷ್ಟವಲ್ಲ ಎಂಬುದೇ ಬುದ್ಧನ ಸಂದೇಶ.