Home » ಸರ್ವನಾಶಕ್ಕೆ ಹೇತು
 

ಸರ್ವನಾಶಕ್ಕೆ ಹೇತು

by Kundapur Xpress
Spread the love

ಒಮ್ಮೆ ಒಂದು ದೊಡ್ಡ ಬಂಗಲೆಯ ಧನಿಕ ಯಜಮಾನ ಯಾವುದೋ ಒಂದು ದೂರದ ದೇಶಕ್ಕೆ ಪ್ರವಾಸ ಹೋದ. ಹೋಗುವ ಮುನ್ನ ಬಂಗಲೆಯಲ್ಲಿನ ಆಳುಕಾಳುಗಳಿಗೆ ತನ್ನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದ. ತನ್ನ ಊರಿನವರಿಗೂ ಆತ ಬಹಳ ಬೇಕಾದವನಾಗಿದ್ದ. ಹಾಗಾಗಿ ಆತನನ್ನು ಬೀಳ್ಕೊಡಲು ಊರಿನವರೆಲ್ಲ ಬಂದಿದ್ದರು. ಅವರೆಲ್ಲರಿಗೂ ಆ ಧನಿಕ ಆತ್ಮೀಯವಾಗಿ ವಿದಾಯ ಹೇಳಿದ. ಹೀಗೆ ಪ್ರವಾಸ ಹೋದ ಯಜಮಾನ ವರ್ಷಗಳು ಉರುಳಿದರೂ ಮರಳಿ ಬರಲಿಲ್ಲ. ಒಂದು ದಿನ ಅಂಚೆಯಲ್ಲಿ ಆತನಿಂದ ಒಂದು ಪತ್ರ ಬಂತು. ಬಂಧುಗಳು, ಆಳು ಕಾಳು ಹಾಗೂ ಊರಿನ ಜನರು ತನ್ನನ್ನು ಮರೆತುಬಿಡಬೇಕು; ತಾನಿನ್ನು ಊರಿಗೆ ಮರಳುವುದಿಲ್ಲ ಎಂದು ಆತ ಆ ಪತ್ರದಲ್ಲಿ ತಿಳಿಸಿದ್ದ. ಆ ಪತ್ರ ಬಂದದ್ದೇ ತಡ, ಆ ಬಂಗಲೆಯಲ್ಲಿನ ಎಲ್ಲರೂ ತಾವೇ ಮನೆಯ ಯಜಮಾನರೆಂಬಂತೆ ವರ್ತಿಸತೊಡಗಿದರು. ಯಾರೊಬ್ಬರೂ ಇತರರ ಮಾತನ್ನು ಕೇಳುತ್ತಿರಲಿಲ್ಲ  ಗೌರವದಿಂದ ಕಾಣುತ್ತಿರಲಿಲ್ಲ. ಹೀಗಾಗಿ ಬಂಗಲೆಯಲ್ಲಿ ಅರಾಜಕತೆ ತುಂಬಿಕೊಂಡಿತು. ಗೌಜಿ, ಗೊಂದಲಗಳಿಂದ ಮನೆ ಸಂತೆಯಾಯಿತು. ಧನಿಕನ ಐಶ್ವರ್ಯವನ್ನು ಎಲ್ಲರೂ ತಮಗಿಷ್ಟ ಬಂದಂತೆ ಪೋಲು ಮಾಡತೊಡಗಿದರು. ಇದನ್ನೆಲ್ಲ ನೋಡುತ್ತಿದ್ದ ಆ ಹಳ್ಳಿಗರಿಗೆ ಆಶ್ಚರ್ಯವೂ ದುಃಖವೂ ಉಂಟಾಯಿತು. ಎಷ್ಟೊಂದು ಒಳ್ಳೆಯ ಮನುಷ್ಯನ ಮನೆಯ ಸ್ಥಿತಿ ಹೀಗಾಗುವುದು ಸರಿಯೇ ಎಂದು ವಿಷಾದಿಸಿದರು. ಇದ್ದಕ್ಕಿದ್ದಂತೆ ಒಂದು ದಿನ ಆ ಯಜಮಾನ ಪ್ರತ್ಯಕ್ಷನಾದ. ಆತನ ಮುಖ ದರ್ಶನವಾದೊಡನೆಯೇ ಮನೆಯಲ್ಲಿದ್ದ ಆಳುಕಾಳುಗಳು ತಮ್ಮ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ವಿವೇಚನೆ ಯಿಂದ ವರ್ತಿಸ ತೊಡಗಿದರು. ಆ ಬಂಗಲೆಯಲ್ಲಿ ಹಿಂದಿನಂತೆ ಮತ್ತೆ ಶಿಸ್ತು, ವಿನಯ, ಸಂಯಮ, ಸಮೃದ್ಧಿ ನೆಲೆಗೊಂಡಿತು ! ನಿಜಕ್ಕಾದರೆ ಇದು ಆ ಧನಿಕನ ಕತೆಯಲ್ಲ ; ನಮ್ಮದೇ ಕತೆ, ನಮ್ಮೊಳಗೆ ಜೀವಾತ್ಮನಾಗಿ ನೆಲೆಸಿರುವ ಪರಮಾತ್ಮನೆಂಬ ನಮ್ಮ ಯಜಮಾನನ ಅನುಪಸ್ಥಿತಿಯಲ್ಲಿ ನಾವು ದಿನನಿತ್ಯ ವರ್ತಿಸುವುದು ಕೂಡ ವಿವೇಚನೆಯೇ ಇಲ್ಲದವರ ಹಾಗೆ, ಹಾಗಾಗಿ ನಮ್ಮ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ನಾಶವನ್ನು ನಾವೇ ತಂದುಕೊಳ್ಳುತ್ತೇವೆ. ಜೀವಾತ್ಮನೆಂಬ ನಮ್ಮ ಯಜಮಾನನನ್ನು ನಾವು ನಮ್ಮೊಳಗೆ ಕಾಣದೆ ಹೋದರೆ ದೇಹ ಮತ್ತು ಮನಸ್ಸುಗಳೆಂಬ ಆಳುಕಾಳುಗಳು ತಮಗೆ ಖುಶಿ ಬಂದಂತೆ ವರ್ತಿಸುತ್ತಾ ನಮ್ಮನ್ನು ಮತ್ತೆ ಮತ್ತೆ ಹುಟ್ಟು ಸಾವಿನ ಚಕ್ರಕ್ಕೆ ಸಿಲುಕಿಸುತ್ತವೆ.

   

Related Articles

error: Content is protected !!