ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿ ಅನುಪಮವಾದ ಶಾಂತಿಯ ಸಂದೇಶವನ್ನು ನೀಡಿದ ಗೌತಮ ಬುದ್ಧನ ದೃಷ್ಟಿಯಲ್ಲಿ ನಮ್ಮ ದೇಹವು ಒಂದು ಮನೆಯೇ ಆಗಿತ್ತು. ಆದರೆ ಬುದ್ಧನ ದೃಷ್ಟಿಯಲ್ಲಿ ‘ಮನೆ’ಯ ಪರಿಕಲ್ಪನೆ ವಿಭಿನ್ನವಾಗಿತ್ತು, ಜ್ಞಾನೋದಯ ಹೊಂದಿದ ಬಳಿಕ ಬುದ್ದನು ಒಂದೆಡೆ ತನ್ನ ಉಪನ್ಯಾಸದಲ್ಲಿ ಹೀಗೆ ಹೇಳುತ್ತಾನೆ: ‘ದುಃಖದಿಂದ ತುಂಬಿಹೋಗಿರುವ ಈ ಜಗತ್ತಿನಲ್ಲಿ ನಾನು ಅನೇಕ ಯುಗಗಳಿಂದ ಬಂದು ಹೋಗುತ್ತಲೇ ಇದ್ದೇನೆ. ಮನೆಗಳನ್ನು ಬದಲಾಯಿಸುತ್ತಲೇ ಇದ್ದೇನೆ. ಹಾಗೆಯೇ ಇಷ್ಟು ಕಾಲವೂ ನಾನು ನನ್ನ ಮನೆಯನ್ನು ಕಟ್ಟುವಾತನನ್ನು ಹುಡುಕುತ್ತಲೇ ಸಾಗಿದ್ದೆ. ಈಗ ನಾನು ಆ ಮನೆ ಕಟ್ಟುವವನನ್ನು ಪತ್ತೆ ಹಚ್ಚಿದ್ದೇನೆ. ಆದುದರಿಂದ ಆತ ಇನ್ನು ಪುನಃ ನನಗೆ ಮನೆ ಕಟ್ಟಿಕೊಡುವುದಿಲ್ಲ! ನನ್ನ ಮನಸ್ಸು ಈಗ ಹಿಂದಿನ ಎಲ್ಲ ಸಂಸ್ಕಾರಗಳಿಂದ ಮುಕ್ತವಾಗಿದೆ. ಬಂಧನದ ಎಲ್ಲ ಸಂಕೋಲೆಗಳೂ ಈಗ ಮುರಿದು ಹೋಗಿವೆ. ನನ್ನೊಳಗಿನ ತೃಸ್ಥೆ (ಕಾಮನೆ) ಈಗ ನಾಶವಾಗಿ ಹೋಗಿದೆ. ಬುದ್ಧನ ಈ ಸಂದೇಶದಲ್ಲಿ ಅಡಗಿರುವ ಸತ್ಯವೇನು ಎಂಬುದನ್ನು ನಾವು ತಿಳಿಯಬೇಕು. ಅದನ್ನು ತಿಳಿಯಲು ಪ್ರಯತ್ನಿದರೆ ಈ ಜಗತ್ತಿನಲ್ಲಿ ನಾವು ಮತ್ತೆ ಮತ್ತೆ ಹುಟ್ಟಿ ಬರಲು ಕಾರಣವೇನು ಎಂಬ ಅಂಶ ಸ್ಪಷ್ಟವಾಗುತ್ತದೆ. ದೇಹವೆಂಬ ಮನೆಯನ್ನು ನಮಗೆ ಈ ಬುವಿಯಲ್ಲಿ ನಿರ್ಮಿಸಿಕೊಡುತ್ತಿರುವ ಆ ‘ಗೃಹ ನಿರ್ಮಾತೃ ಯಾರು?’ ಎಂಬ ಪ್ರಶ್ನೆಗೆ ಉತ್ತರವೂ ಸಿಗುತ್ತದೆ. ಆ ಗೃಹ ನಿರ್ಮಾತೃ ಬೇರೆ ಯಾರೂ ಅಲ್ಲ – ನಮ್ಮೊಳಗಿನ ಕಾಮನೆಯೇ ನಮಗೆ ಮತ್ತೆ ಮತ್ತೆ ದೇಹವೆಂಬ ಮನೆಯನ್ನು ಕಟ್ಟಿಕೊಡುವ ಮೇಸ್ತ್ರಿ ಅವನು ಹೊರಗೆಲ್ಲೂ ಇಲ್ಲ, ನಮ್ಮೊಳಗೇ ಇದ್ದಾನೆ. ನಾವೇ ಆತನನ್ನು ಚೆನ್ನಾಗಿ ಪೋಷಿಸಿ ಆತನ ‘ಕಾಯಕ’ಕ್ಕೆ ‘ಒಳ್ಳೆಯ ಬೆಲೆ’ಯನ್ನು ತೆರುತ್ತಿದ್ದೇವೆ. ಆ ‘ಬೆಲೆ’ ಬೇರೇನೂ ಅಲ್ಲ – ಪುನರಪಿ ಜನನಂ, ಪುನರಪಿ ಮರಣಂ! ಬುದ್ಧನ ಪ್ರಕಾರ ನಾವು ಮತ್ತೆ ಮತ್ತೆ ಜನುಮಿಸಿ ಬರಲು ನಮ್ಮೊಳಗೆ ತುಂಬಿಕೊಂಡಿರುವ ಕಾಮನೆಗಳೇ ಕಾರಣ. ರಕ್ತ ಬೀಜಾಸುರನಂತೆ ಹುಟ್ಟುತ್ತಲೇ ಇರುವ ಆಸೆಗಳು ಎಂದೆಂದೂ ಹುಟ್ಟದಂತೆ ಮಾಡಲು ಸಾಧ್ಯವಾದರೆ ಜನನ-ಮರಣಗಳ ಚಕ್ರದಿಂದ ನಾವು ಪಾರಾಗಬಹುದು