ವಿಶ್ವವಿಖ್ಯಾತ ಚಿಂತಕ, ದಾರ್ಶನಿಕ ಸಾಕ್ರೆಟಿಸ್ ಒಂದೆಡೆ ಹೇಳುತ್ತಾನೆ: ಹುಟ್ಟು ನಮ್ಮ ಕೈಯಲ್ಲಿಲ್ಲ ಆದರೆ ಚೆನ್ನಾಗಿ ಬದುಕುವುದು ನಮ್ಮ ಕೈಯಲ್ಲಿದೆ. ಚೆನ್ನಾಗಿ ಬದುಕುವುದು ಎಂದರೇನು? ಈ ಪ್ರಶ್ನೆ ನಮ್ಮಲ್ಲಿ ಸಾಕಷ್ಟು ಗೊಂದಲ ಹುಟ್ಟಿಸುವಂತಿದೆ ! ಚೆನ್ನಾಗಿ ಬದುಕುವುದೆಂದರೆ ಐಹಿಕ ಸುಖಭೋಗ ಗಳನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಅನುಭವಿಸಿ ಸಂತೋಷಪಡುವುದು ಎಂಬ ಭಾವನೆ ಹೆಚ್ಚಿನವರದ್ದು. ಈ ಭಾವನೆ ನಮ್ಮಲ್ಲಿಯೂ ಇರುವುದಾದರೆ ನಾವು ಬದುಕಿನ ಉದ್ದಕ್ಕೂ ದುಃಖದಲ್ಲೇ ತೊಳಲಾಡಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಭೋಗವೇ ಪ್ರಧಾನವಾದಾಗ ಬದುಕು ಯಾವ ಮಟ್ಟಕ್ಕೂ ಇಳಿಯುವುದು ಸಾಧ್ಯ. ಏಕೆಂದರೆ ಭೋಗದಿಂದ ದೇಹದ ತೃಷೆಯನ್ನು ನಿವಾರಿಸಲು ಹೋದರೆ ಬೆಂಕಿಗೆ ತುಪ್ಪವನ್ನು ಎರೆಯುತ್ತಾ ಹೋದಂತಾಗುವುದು. ಬೆಂಕಿಯನ್ನು ಆರಿಸಲು ತಣ್ಣೀರನ್ನು ಹೊಯ್ಯಬೇಕೇ ವಿನಾ ತುಪ್ಪವನ್ನಲ್ಲ. ದೇಹವು ಬಯಸುವ ಸುಖಭೋಗಗಳು ಬೆಂಕಿಯು ಚೆನ್ನಾಗಿ ಉರಿಯಲು ಬಯಸುವ ತುಪ್ಪದಂತೆ. ಆದುದರಿಂದ ಚೆನ್ನಾಗಿ ಬದುಕುವುದೆಂದರೆ ದೇಹವನ್ನು ರೋಗಗಳ ಉಗ್ರಾಣ ಮಾಡುವ ಹಾಗೆ ತಿಂದುAಡು ಬದುಕುವುದಲ್ಲ, ಅತಿಯಾದ ಆಹಾರ ಸೇವನೆಯಿಂದ ದೇಹದ ಆರೋಗ್ಯ ಕೆಡುವಂತೆ ಲೋಭ, ಮೋಹ, ಮದ, ಮತ್ಸರಗಳನ್ನು ಪೋಷಿಸುವ ಮೂಲಕ ಮನಸ್ಸು ಕೂಡ ವಿಷಮಯಗೊಳ್ಳುತ್ತದೆ. ದೇಹ ಮತ್ತು ಮನಸ್ಸನ್ನು ಹಿತಮಿತವಾದ ಆಹಾರ ಹಾಗೂ ಸದ್ವಿಚಾರ ಚಿಂತನೆಗಳಿAದ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ತತ್ಪರಿಣಾಮವಾಗಿ ದೇಹ ಮತ್ತು ಮನಸ್ಸು ಆರೋಗ್ಯದಿಂದ ಕ್ರಿಯಾಶೀಲವಾಗಿರುತ್ತದೆ. ಬುದ್ಧಿಯ ಸಂಪೂರ್ಣ ನಿಯಂತ್ರಣವು ಏರ್ಪಟ್ಟು ಆತ್ಮಶಕ್ತಿಯು ಜಾಗೃತವಾಗಿರುತ್ತದೆ. ಅದರಿಂದ ನಿತ್ಯವೂ ದೇವರ ಸ್ಮರಣೆ ಸಾಧ್ಯವಾಗುತ್ತದೆ. ಆಗ ಮಾತ್ರವೇ ನಾವು ಚೆನ್ನಾಗಿ ಬದುಕುತ್ತಿದ್ದೇವೆ ಎಂದರ್ಥ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಆದರೆ ಚೆನ್ನಾಗಿ ಬದುಕುವುದು ನಮ್ಮ ಕೈಯಲ್ಲಿದೆ ಎಂಬ ಸತ್ಯವನ್ನು ಸರಳ ಜೀವನದ ನೆಲೆಯಲ್ಲಿ ಅರಿಯಬೇಕು. ಅಂತೆಯೇ ಲೋಕೋಕ್ತಿಯೊಂದು ಹೀಗಿದೆ: ದೇಹಕ್ಕೆ ತಲೆಯಿರಬೇಕು. ಮನೆಗೆ ಒಲೆಯಿರಬೇಕು. ಮಾತಿಗೆ ಬೆಲೆಯಿರಬೇಕು. ಜೀವನಕ್ಕೆ ಕಲೆಯಿರಬೇಕು.