ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಈ ಜನ್ಮವನ್ನು ದೇವರ ಪ್ರೀತ್ಯರ್ಥವಾಗಿ ಚೆನ್ನಾಗಿ ಕಳೆದರೆ ಜನನ-ಮರಣಗಳ ಚಕ್ರದಿಂದ ಪಾರಾಗಿ ದೇವರೊಡನೆ ಸೇರುವ ಸೌಭಾಗ್ಯ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಬೇಡ. ಆದುದರಿಂದ ನೀನು ಸಂಪೂರ್ಣವಾಗಿ ನನಗೆ ಶರಣು ಬಂದರೆ ಅಷ್ಟೇ ಸಾಕು. ನಿನ್ನೆಲ್ಲ ಕರ್ಮಗಳನ್ನು ನನಗೊಪ್ಪಿಸಿ ನಿಶ್ಚಿಂತೆಯಿAದ ನೀನು ನಿನ್ನ ಪಾಲಿನ ಕರ್ತವ್ಯಗಳನ್ನು ಪೂರೈಸು. ಅದರ ಫಲಾಫಲಗಳನ್ನು ಚಿಂತಿಸ ಬೇಡ’ ಎಂದು ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಮಾತು ಜನಜನಿತವಾಗಿದೆ. ಅದೇ ಸಂದರ್ಭದಲ್ಲಿ ಶ್ರೀಕೃಷ್ಣನು ಇನ್ನೊಂದು ಮಾತು ಹೇಳುತ್ತಾನೆ: ನಿಜವಾದ ಜ್ಞಾನಿ ಎನಿಸಿಕೊಂಡವನು ದೇವರ ಸೃಷ್ಟಿಯಲ್ಲಿ ಯಾವುದೇ ತರತಮವನ್ನು ಕಾಣಲಾರನು. ಪಂಡಿತ-ಪಾಮರ, ಬಡವ-ಬಲ್ಲಿದ, ಮೇಲು-ಕೀಳು ಎಂಬ ಭಾವನೆ ಆತನಲ್ಲಿ ಮೂಡಲಾರದು. ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರ ಕೂಡ ಮತ್ತೆ ಇದನ್ನೇ ಹೇಳು ತ್ತಾನೆ: ಎಲ್ಲ ಆತ್ಮಗಳೂ ಸಮಾನವಾಗಿವೆ. ಅವುಗಳಲ್ಲಿ ಒಂದು ದೊಡ್ಡದು ಮತ್ತೊಂದು ಸಣ್ಣದು ಎಂಬ ವ್ಯತ್ಯಾಸಗಳಿಲ್ಲ. ಪ್ರಕೃತಿಯಲ್ಲಿ ತರತಮದ ಭಾವನೆಯನ್ನು ಕಾಣುವವರು ಅಜ್ಞಾನಿಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಪ್ರಕೃತಿಯಲ್ಲಿ ಪ್ರತಿಯೊಂದರಲ್ಲೂ ದೇವರ ಅಂಶವೇ ವ್ಯಕ್ತವಾಗಿರುವುದನ್ನು ಕಾಣಬೇಕಾದರೆ ತರತಮದ ಭಾವನೆಯಿಂದ ನಾವು ಮುಕ್ತರಾಗ ಬೇಕು. ಮೇಲು-ಕೀಳೆಂಬ ಭಾವನೆಗಳು ನಮ್ಮ ಅಂತರ್ ದೃಷ್ಟಿಯಲ್ಲಿನ ಲೋಪದೋಷಗಳೇ ವಿನಾ ನಾವು ಕಾಣುವ ವಸ್ತುವಿನಲ್ಲಿ ಇರುವಂತಹದ್ದಲ್ಲ. ಹಾಗೆಯೇ ವಿಭಿನ್ನ ಬಗೆಯ ಜನರಲ್ಲಿ, ವ್ಯಕ್ತಿತ್ವಗಳಲ್ಲಿ ನಾವು ಕಾಣುವ ತರತಮಗಳು ನಮ್ಮಲ್ಲಿನ ಅಸಮತೆಯ ಪ್ರತಿಫಲನವೇ ಆಗಿವೆ. ನಮ್ಮಲ್ಲಿನ ಕಾಮಕ್ರೋಧಾದಿ ಷಡ್ವರ್ಗಗಳು ನಮ್ಮ ಮೇಲೆ ಪ್ರಭುತ್ವ ಹೊಂದಿರುವಷ್ಟು ಕಾಲವೂ ನಾವು ಪ್ರಕೃತಿಯಲ್ಲಿ ಅಸಮತೆಯನ್ನೂ ತರತಮವನ್ನೂ ಕಾಣುತ್ತೇವೆ.ಆದುದರಿಂದಲೇ ನಮಗೆ ದೇವರನ್ನು ಸರ್ವಾಂತರ್ಯಾಮಿಯನ್ನಾಗಿ ಪರಿಭಾವಿಸುವುದು ಅಸಾಧ್ಯವಾಗಿದೆ. ಮನದೊಳಗಿನ ಅಸಮತೆ ಯನ್ನು ಹೋಗಲಾಡಿಸಲು ಆತ್ಮನನ್ನು ಮುಸುಕಿಕೊಂಡಿರುವ ಅಜ್ಞಾನದ ಪರದೆಯನ್ನು ನಾವು ಸರಿಸು ವುದು ಅಗತ್ಯ.