55. ಸಮತ್ವದ ಭಾವ
ಅಂತಃಕರಣವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಮುಖ್ಯವಾಗಿ ಬೇಕಾದದ್ದು ಏನು? ಈ ರಹಸ್ಯವನ್ನು ತಿಳಿಯದೆ ನಾವು ಬದುಕಿನಲ್ಲಿ ಯಾವ ಮಹತ್ಕಾರ್ಯವನ್ನೂ ಸಾಧಿಸಲಾರೆವು. ನೆಮ್ಮದಿಯನ್ನೂ ಪಡೆಯಲಾರೆವು. ಶಾಂತಿ – ಸಮಾಧಾನವನ್ನೂ ಗಳಿಸಲಾರೆವು. ಇವೆಲ್ಲವನ್ನು ಪಡೆಯುವುದಕ್ಕೂ ಅಂತಃಕರಣವನ್ನು ಸ್ವಾಧೀನದಲ್ಲಿರಿಸಿಕೊಳ್ಳುವುದಕ್ಕೂ ಒಂದು ಕೊಂಡಿ ಇದೆ. ಅದುವೇ ದೇವಪ್ರಜ್ಞೆ! ದೇವರನ್ನು ಅನುದಿನವೂ ಅನುಕ್ಷಣವೂ ನೆನೆಯುತ್ತಾ ಬದುಕಿನ ಸಮಸ್ತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು ಅಗತ್ಯ. ಹೀಗೆ ಪ್ರತಿಯೊಂದು ಕೆಲಸವನ್ನು ಕೈಗೊಂಡಾಗಲೂ ಮತ್ತು ಅದನ್ನು ಪೂರೈಸಿದಾಗಲೂ ದೇವರ ಪ್ರೀತ್ಯರ್ಥವಾಗಿ ಆತನ ಆಶೀರ್ವಾದ ಬಲದಿಂದಲೇ ಅದನ್ನು ಮಾಡಿದೆವು ಎಂಬ ಭಾವನೆಯನ್ನು ಬೆಳಸಿಕೊಳ್ಳಬೇಕು. ಆಗ ‘ನಾನೇ ಕರ್ತೃ’ವೆಂಬ ಭಾವನೆ ಬರಲಾರದು. ಯಾವುದೇ ಕಾರ್ಯ ನೆರವೇರಿದಾಗ ‘ನನ್ನ ಸಾಮಥ್ರ್ಯ ಬಲದಿಂದ ಇದು ಸಾಧ್ಯವಾಯಿತು’ ಎಂದು ನಾವು ಬೀಗುವುದು ಸಾಮಾನ್ಯ. ಹಾಗೆ ಬೀಗುವುದರಿಂದಾಗಿಯೇ ನಮ್ಮ ಕಾರ್ಯವೈಖರಿಯಲ್ಲಿನ ಸಣ್ಣಪುಟ್ಟ ಲೋಪ – ದೋಷಗಳನ್ನು ಕೂಡ ನಾವು ಒಪ್ಪಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಕಾರಣ ನಾನೇ ಕರ್ತೃವೆಂಬ ಅಹಂಕಾರದಲ್ಲಿ ಸಣ್ಣಸಣ್ಣ ಆಘಾತಗಳನ್ನು ಕೂಡ ತಾಳಿಕೊಳ್ಳುವ ಶಕ್ತಿಯನ್ನು ನಾವು ಕಳೆದುಕೊಂಡಿರುತ್ತೇವೆ. ನಮ್ಮ ಬಿಗುಮಾನವೇ ನಮ್ಮ ಅಧಃಪತಕ್ಕೆ ಕಾರಣವಾಗುತ್ತದೆ. ನಮ್ಮೆಲ್ಲ ಕಾರ್ಯ ಚಟುವಟಿಕೆಗಳು ಈಶ್ವರನಿಗೆ ಸಮರ್ಪಿತವೆಂದು ತಿಳಿದು ಆತನಿಗೆ ಸಂಪೂರ್ಣ ಶರಣಾಗತಿಯನ್ನು ತೋರಿದಲ್ಲಿ ಮಾತ್ರವೇ ನಮ್ಮ ಪ್ರತಿಯೊಂದು ಸೋಲು ಕೂಡ ಗೆಲುವಿನ ಸೋಪಾನವಾಗಬಲ್ಲುದು. ಏಕೆಂದರೆ ಆ ಸೋಲನ್ನು ಸ್ವೀಕರಿಸುವ ಸಮತ್ವದ ಭಾವ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಮನಸ್ಸಿನ ಸಮತ್ತ್ವವನ್ನು ಸಾಧಿಸಲು ನಾನು ನಾನೆಂಬ ಅಹಂಕಾರವನ್ನು ತೊಡೆದುಹಾಕುವುದು ಅಗತ್ಯ. ಐಹಿಕ ಜಗತ್ತಿನ ಸಮಸ್ತ ಕಾಮನೆಗಳು ದೈಹಿಕವಾಗಿರುವುದರಿಂಲೇ ಅಹಂಕಾರ – ಮಮಕಾರಗಳ ಪೀಡನೆಗೆ ನಾವು ನಿರಂತರ ಗುರಿಯಾಗಿರುತ್ತದೆ.