- ನಿಜವಾದ ಪ್ರಾರ್ಥನೆ
ದೇವರಲ್ಲಿ ಮನಸ್ಸನ್ನು ನೆಡಬೇಕೆಂದು ಎಲ್ಲರೂ ಬಯಸುತ್ತಾರೆ. ಕಾರಣ ತಮ್ಮ ಒಂದಲ್ಲ ಒಂದು ಬೇಡಿಕೆಯನ್ನು ಆತನು ಈಡೇರಿಸಬೇಕು ಎಂಬ ಬಯಕೆ ಅವರದ್ದಾಗಿರುತ್ತದೆ. ಸಾಮಾನ್ಯವಾಗಿ ದೇವರನ್ನು ಪ್ರಾರ್ಥಿಸುವಾಗಲೆಲ್ಲ ನಾವು ಒಂದಲ್ಲ ಒಂದು ಬಗೆಯ ಬೇಡಿಕೆಯನ್ನು ಆತನ ಮುಂದೆ ಇಡುತ್ತೇವೆ. ಒಟ್ಟಿನಲ್ಲಿ ಆ ಪ್ರಾರ್ಥನೆಯ ಮೂಲಕ ನಾವು ನಮ್ಮ ಸಂಪತ್ತು, ಸೌಕರ್ಯ, ಐಶಾರಾಮಗಳು ಹೆಚ್ಚಬೇಕೆಂದೇ ಬಯಸುತ್ತೇವೆ. ನಮ್ಮ ದೊಡ್ಡ ದೌರ್ಬಲ್ಯವೆಂದರೆ ದೇವರೊಡನೆ ನಾವು ಬೇಡುವುದೆಲ್ಲ ನಮಗಾಗಿ ಮತ್ತು ಕೇವಲ ನಮ್ಮವರಿಗಾಗಿ ಮಾತ್ರವೇ! ಹೀಗೆ ಮಾಡುವ ಯಾವತ್ತೂ ಪ್ರಾರ್ಥನೆಗಳು ನಿಜವಾದ ಅರ್ಥದಲ್ಲಿ ಪ್ರಾರ್ಥನೆಗಳೇ ಅಲ್ಲ. ಸ್ವಾರ್ಥಪರ ಬೇಡಿಕೆಗಳು ನಮ್ಮಲ್ಲಿನ ಸ್ವಾರ್ಥ ಪರತೆಯನ್ನು ಹೆಚ್ಚಿಸುವುದಲ್ಲದೆ ಇನ್ನೇನನ್ನೂ ಮಾಡುವುದಿಲ್ಲ. ವಿಚಿತ್ರವೆಂದರೆ ದೇವರಲ್ಲಿ ನಾವು ನಮಗಾಗಿ ಮಾಡಿಕೊಳ್ಳುವ ಬೇಡಿಕೆಗಳು ಸರ್ವಥಾ ಇತರರ ಪಾಲಾಗಬಾರದೆಂಬ ಬೇಡಿಕೆಯನ್ನೂ ಒಳಗೊಂಡಿರುತ್ತವೆ. ನಮ್ಮ ಬೇಡಿಕೆಗಳನ್ನು ದೇವರು ಈಡೇರಿಸಬೇಕೆಂಬ ಆಸೆಯಲ್ಲಿ ಎಷ್ಟೆಲ್ಲ ಖರ್ಚುಮಾಡಿ ಪೂಜೆ-ಪುರಸ್ಕಾರಗಳನ್ನೂ ಹೋಮ – ಹವನಗಳನ್ನೂ ಮಾಡಿಸುತ್ತೇವೆ. ಆದರೆ ದೇವರಿಗೆ ಅದ್ಯಾವುದೂ ಬೇಡ. ನಮ್ಮ ಪ್ರಾರ್ಥನೆಯ ಹಿಂದಿರುವ ಉದ್ದೇಶವೇನು ಎಂಬುದೇ ಆತನಿಗೆ ಮುಖ್ಯವಾಗುತ್ತದೆ. ನಮ್ಮ ಸ್ವಂತದ ಒಳಿತಿಗಾಗಿ, ನಮ್ಮ ಬಂಧು-ಮಿತ್ರರ ಒಳಿತಿಗಾಗಿ ನಾವು ದೇವರ ಮುಂದಿಡುವ ಬೇಡಿಕೆಗಳು ಪ್ರಾರ್ಥನೆಯ ಎತ್ತರವನ್ನು ತಲುಪುವುದಿಲ್ಲ. ಏಕೆಂದರೆ ಅದರಲ್ಲಿ ಐಹಿಕ ಸುಖಗಳನ್ನು ಹೆಚ್ಚೆಚ್ಚು ಅನುಭವಿಸಲು ಅನುಕೂಲ ಉಂಟಾಗಲೆಂಬ ಆಶಯವೇ ಅಡಗಿದೆ. ಆದರೆ ಸಮಸ್ತ ಲೋಕದ ಕಲ್ಯಾಣಕ್ಕಾಗಿ ಸಮಸ್ತ ಜನತೆಯ ಅಭ್ಯುದಯಕ್ಕಾಗಿ ದೇವರಲ್ಲಿ ನಾವು ಮಾಡುವ ಪ್ರಾರ್ಥನೆಯೊಂದೇ ನಿಜವಾದ ಪ್ರಾರ್ಥನೆಯಾಗಿದೆ!