ನವದೆಹಲಿ : 31 ಟ್ಯಾಬ್ಲೊಗಳು, ಭಾರತದ ಗುಡ್ಡಗಾಡು ಜನರ ಜಾನಪದ ಶ್ರೀಮಂತಿಕೆ, ಸುಖೋಯ್, ರಫೇಲ್ ಯುದ್ಧವಿಮಾನಗಳು, ಸೇನಾ ಹೆಲಿಕಾಪ್ಟರ್ಗಳ ಕಸರತ್ತುಗಳು, ನಾರಿ ಶಕ್ತಿ ಭಾರತದ 76ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕಣ್ಮನ ಸೆಳೆಯಿತು.
ಸುವರ್ಣ ಭಾರತ-ಪರಂಪರೆ ಮತ್ತು ಪ್ರಗತಿಯ ಧೈಯವನ್ನಿಟ್ಟುಕೊಂಡು ದೆಹಲಿಯ ಕರ್ತವ್ಯ ಪಥದಲ್ಲಿ ಭಾನುವಾರ ಆಯೋ ಜಿಸಿದ್ದ ಗಣರಾಜ್ಯೋತ್ಸವ ಪರೇಡ್ನಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ, ಸೇನಾ ಶಕ್ತಿ, ಆರ್ಥಿಕ ಪ್ರಗತಿ ಮತ್ತು ವಿಜ್ಞಾನ ಮತ್ತು ತಂತ್ರ ಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ದೇಶ-ವಿದೇಶದ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು
ಚುಮುಚುಮು ಚಳಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಈ ಬಾರಿಯ ಗಣರೋಜ್ಯೋತ್ಸವದ ವಿಶೇಷ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂಟೋ ಅವರು ಸಾರೋಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರು, ಸೇನಾ ಮುಖ್ಯಸ್ಥರು, ವಿದೇಶಿ ರಾಯಭಾರಿ ಗಳು ಹಾಗೂ 10 ಸಾವಿರ ಜನಸಾಮಾನ್ಯ ಅತಿಥಿಗಳು ಭಾರತದ ಸಾಂಸ್ಕೃತಿಕ ವೈಭವ ಹಾಗೂ ಸೇನಾ ಶಕ್ತಿಯನ್ನು ಕಣ್ತುಂಬಿಕೊಂಡರು
ಸಾಂಸ್ಕೃತಿಕ ವೈಭವ ಅನಾವರಣ :
ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಜಾನಪದ ಮತ್ತು ಗುಡ್ಡಗಾಡು ಕಲಾವಿದರು ದೇಶದ ವಿವಿಧೆಡೆಯ 45 ನೃತ್ಯ ರೂಪಕವನ್ನು ಪ್ರದರ್ಶಿಸಿ ಗಮನ ಸೆಳೆದರು. ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಗೌರವಾರ್ಥ ಗುಡ್ಡಗಾಡು ಜನರ ಜಾನಪದ ಕಲಾ ಶ್ರೀಮಂತಿಕೆ ಪ್ರದರ್ಶಿಸಲಾಯಿತು