ಅಹಮದಾಬಾದ್ : ಗುಜರಾತ್ ವಿಮಾನ ದುರಂತದಲ್ಲಿ ಪವಾಡ ಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅಪಘಾತದಿಂದ ತಾವು ಪಾರಾದ ರೀತಿಯನ್ನು ವಿವರಿಸಿದ್ದಾರೆ.
‘ವಿಮಾನದ ಎಡಭಾಗದಲ್ಲಿರುವ ತುರ್ತು ಬಾಗಿಲಿನ ಪಕ್ಕದಲ್ಲಿದ್ದ 11ಎ ಸೀಟ್‌ನಲ್ಲಿ ನಾನು ಕುಳಿತಿದ್ದೆ. ವಿಮಾನ ಟೇಕ್ ಆಫ್ ಕೆಲ ಹೊತ್ತಿನಲ್ಲೇ ಅದರೊಳಗಿನ ನೀಲಿ ಮತ್ತು ಬಿಳಿಯ ಬಣ್ಣದ ಲೈಟ್ ಆನ್ ಆದವು. ವಿಮಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಬೇಕಾದ ಶಕ್ತಿ ಪಡೆಯಲು ಪೈಲಟ್‌ಗಳು ಮುಂದಾಗಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಇದಾದ ಕೆಲ ಕ್ಷಣಗಳಲ್ಲೇ ವಿಮಾನ ಭಾರೀ ಸದ್ದಿನೊಂದಿಗೆ ಕಟ್ಟಡದ ಮೇಲೆ ಅಪ್ಪಳಿಸಿತು. ಈ ವೇಳೆ ವಿಮಾನ 2 ಭಾಗಗಳಾಗಿ ತುಂಡಾಯಿತು. ನಾನು ಕುಳಿತಿದ್ದ ವಿಮಾನದ ಭಾಗ ತುಂಡಾಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನ ನೆಲಮಹಡಿಯ ಮೇಲೆ ಬಿತ್ತು.
ಕಣ್ಣುಬಿಡುವಷ್ಟರಲ್ಲಿ ನಾನು ವಿಮಾನದ ಅವಶೇಷಗಳೊಂದಿಗೆ ಕೆಳಗೆ ಬಿದ್ದಿದ್ದೆ. ವಿಮಾನದ ಬಾಗಿಲು ಮುರಿದಿತ್ತು. ಈ ವೇಳೆ ಅಲ್ಲಿಂದ ತೂರಿಕೊಂಡು ಹೊರಗೆ ಬಂದೆ. ವಿಮಾನದ ಇನ್ನೊಂದು ಭಾಗದಲ್ಲಿ ಹಾಸ್ಟೆಲ್ ಗೋಡೆ ಇದ್ದ ಕಾರಣ ಬಹುಷಃ ಆ ಕಡೆ ಕುಳಿತವರು ಹೊರಬರಲಾಗಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಉಂಡೆ ಕಾಣಿಸಿಕೊಂಡಿತು. ನನ್ನ ಕಣ್ಣೆದುರೇ ಅನೇಕರು ಸಾವನ್ನಪ್ಪಿದರು. ನಾನು ಬದುಕಿದ್ದನ್ನು ನಂಬಲಾಗುತ್ತಿಲ್ಲ ಎಂದು ವಿಶ್ವಾಸ್ ಹೇಳಿದ್ದಾರೆ.

